ದೇಶದ ನಿರುದ್ಯೋಗಿಗಳ ಪೈಕಿ ಶೇ83ರಷ್ಟು ಮಂದಿ ಯುವಕರಾಗಿದ್ದು ಹಾಗೂ ಒಟ್ಟು ನಿರುದ್ಯೋಗಿ ಯುಜನತೆಯಲ್ಲಿ ಸೆಕೆಂಡರಿ ಅಥವಾ ಉನ್ನತ ಶಿಕ್ಷಣ ಪಡೆದ ಯುವಜನರ ಪಾಲು 2000ರಲ್ಲಿ ಶೇ35.2 ಆಗಿದ್ದರೆ 2022ರಲ್ಲಿ ಬಹುತೇಕ ದ್ವಿಗುಣಗೊಂಡು ಶೇ65.7ರಷ್ಟಾಗಿದೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ಡೆವಲೆಪ್ಮೆಂಟ್ ಬಿಡುಗಡೆಗೊಳಿಸಿದೆ ಭಾರತದ ಉದ್ಯೋಗ ವರದಿ 2024ರಲ್ಲಿ ತಿಳಿಸಲಾಗಿದೆ.
ಶೇ 90ರಷ್ಟು ಕೆಲಸಗಾರರು ಅನೌಪಚಾರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ನಿಯಮಿತ ಕೆಲಸ ಪ್ರಮಾಣ 2000 ರ ನಂತರ ಏರಿಕೆಯಾದರೂ 2018ರ ನಂತರ ಇಳಿಮುಖವಾಗಿದೆ.
ಜೀವನೋಪಾಯ ಅಸುರಕ್ಷತೆಗಳು ವ್ಯಾಪಕವಾಗಿವೆ ಹಾಗೂ ಸ್ವಲ್ಪ ಜನರು ಮಾತ್ರ ಸಾಮಾಜಿಕ ರಕ್ಷಣಾ ಯೋಜನೆ ಹೊಂದಿದ್ದಾರೆ ಎಂದು ವರದಿ ಹೇಳಿದೆ. ನಿಯಮಿತ ಕೆಲಸಗಾರರ ಪೈಕಿ ಸಣ್ಣ ಪ್ರಮಾಣ ಮಾತ್ರ ದೀರ್ಘಾವಧಿ ಗುತ್ತಿಗೆಗಳಡಿ ನೇಮಕಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತದ ಯುವಜನತೆಯ ಪೈಕಿ ಶೇ65ರಷ್ಟು ಮಂದಿಗೆ ಲಗತ್ತುಗಳೊಂದಿಗೆ ಇಮೇಲ್ ಕಳುಹಿಸುವ ಕೌಶಲ್ಯವಿಲ್ಲ ಶೇ 60ರಷ್ಟು ಮಂದಿಗೆ ಫೈಲ್‌ಗಳನ್ನು ನಕಲಿಸಲು ಮತ್ತು ಅಂಟಿಸಲು ಗೊತ್ತಿಲ್ಲ ಹಾಗೂ ಶೇ90ರಷ್ಟು ಮಂದಿಗೆ ಗಣಿತ ಸೂತ್ರವನ್ನು ಸ್ಪ್ರೆಡ್‌ಶೀಟ್‌ಗೆ ತುಂಬಲು ಗೊತ್ತಿಲ್ಲ ಎಂದು ವರದಿ ಹೇಳಿದೆ.
ಉನ್ನತ ಶಿಕ್ಷಣ ಪಡೆದ ಯುವಜನತೆಯಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಿದೆ ಹಾಗೂ ಉನ್ನತ ಶಿಕ್ಷಣ ಪಡೆದವರು ಈಗ ಲಭ್ಯವಿರುವ ಕಡಿಮೆ ವೇತನದ ಅಸುರಕ್ಷಿತ ಉದ್ಯೋಗ ಪಡೆಯಲು ಮನಸ್ಸು ಮಾಡುತ್ತಿಲ್ಲ. ಭಾರತದಲ್ಲಿ ಪುರುಷರಿಗೆ ಹೋಲಿಸಿದಾಗ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಡಿಮೆಯಾಗಿದೆ. ಉನ್ನತ ಶಿಕ್ಷಣ ಪಡೆದ ಯುವತಿಯರಲ್ಲೂ ನಿರುದ್ಯೋಗ ಪ್ರಮಾಣ ಬಹಳಷ್ಟಿದೆ ಎಂದು ವರದಿ ಹೇಳಿದೆ.