ಮಾಸ್ಕೊ: 'ಉಕ್ರೇನ್ ನಿರಂತರವಾಗಿ ಶೆಲ್ ದಾಳಿ ನಡೆಸುತ್ತಿದ್ದು, ಗಡಿ ಪ್ರದೇಶದಲ್ಲಿರುವ ಸುಮಾರು 9 ಸಾವಿರ ಮಕ್ಕಳನ್ನು ಸ್ಥಳಾಂತರಿಸಲು ಯೋಜಿಸಲಾಗಿದೆ' ಎಂದು ರಷ್ಯಾದ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
'ಉಕ್ರೇನ್‌ನ ಗಡಿಯಿಂದ ಮಕ್ಕಳನ್ನು ಮತ್ತಷ್ಟು ಪೂರ್ವಕ್ಕೆ ಸ್ಥಳಾಂತರಿಸಲಾಗುವುದು' ಎಂದು ರಷ್ಯಾದ ಬೆಲ್ಗೊರೊಡ್ ಗಡಿ ಪ್ರದೇಶದ ಗವರ್ನರ್ ವ್ಯಾಚೆಸ್ಲೆವ್ ಗ್ಲ್ಯಾಡ್ಕೋವ್ ಹೇಳಿದ್ದಾರೆ.
'ಗಡಿಯಾಚೆಗಿನ ಹಾಗೂ ಉಕ್ರೇನ್‌ನ ದಾಳಿಯಿಂದ ದೇಶದ ಗಡಿ ಪ್ರದೇಶವನ್ನು ರಕ್ಷಿಸಲು ಬಫರ್ ವಲಯ ರಚಿಸುವುದಾಗಿ' ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಘೋಷಿಸಿದ ಮರುದಿನವೇ ಈ ಪ್ರಕಟಣೆ ಹೊರಬಿದ್ದಿದೆ.
ರಷ್ಯಾದೊಳಗಿರುವ ತೈಲ ಸಂಸ್ಕರಣಾಗಾರಗಳು, ಡಿಪೊಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ದಾಳಿಗೆ ಮುಂದಾಗಿದೆ. ರಷ್ಯಾದ ಗಡಿಗಳಲ್ಲಿ ಅಸ್ಥಿರತೆ ಸೃಷ್ಟಿಸಿದೆ. ಈ ವಿದ್ಯಮಾನ ಪುಟಿನ್ ಆಡಳಿತದ ಮೇಲೆ ರಾಜಕೀಯ ಒತ್ತಡವನ್ನುಂಟು ಮಾಡಿದೆ.
'ಬೆಲ್ಗೊರೊಡ್ ಪ್ರದೇಶದ ಮೇಲೆ ಉಕ್ರೇನ್ ಮಂಗಳವಾರದಂದು ನಡೆಸಿದ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ. ಇದರಲ್ಲಿ ತಾಯಿ-ಮಗುವಿನ ಪರಿಸ್ಥಿತಿ ಗಂಭೀರವಾಗಿದೆ. ಹಿಂದಿನ ದಿನ ನಿಕೋಲ್ಸ್ಕೋ ಗ್ರಾಮದ ಮೇಲೆ ನಡೆದ ದಾಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ' ಎಂದು ಗ್ಲ್ಯಾಡ್ಕೋವ್ ತಿಳಿಸಿದ್ದಾರೆ.
ಉಕ್ರೇನ್‌ನ ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.
ಉಕ್ರೇನ್‌ನ ಸೆಲಿಡೋವ್ ನಗರದ ಮೇಲೆ ರಷ್ಯಾ ಎಸ್-300 ಕ್ಷಿಪಣಿಗಳನ್ನು ಉಡಾಯಿಸಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಮನೆ ಹಾಗೂ ಕಾರುಗಳಿಗೆ ಹಾನಿಯಾಗಿದೆ ಪ್ರಾದೇಶಿಕ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ. ಡೊನೆಟೆಸ್ಕ್ ಮೇಲೆ ಸೋಮವಾರ ನಡೆದ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದರೆ, ಮತ್ತಿಬ್ಬರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ವಾಡಿಮ್ ಫಿಲಾಶ್ಕಿನ್ ತಿಳಿಸಿದ್ದಾರೆ.