ಭೂಮಿ ಮೇಲೆ ಅತ್ಯಂತ ಕೆಟ್ಟ ವರ್ಷ ಯಾವುದು ಅಂತ ಪ್ರಶ್ನೆ ಮಾಡಿದರೆ ಒಂದಿಷ್ಟು ವರ್ಷಗಳ ಹೆಸರನ್ನು ಹೇಳಬಹುದು. ಕೆಲವರು ಮಹಾಯುದ್ಧಗಳ ಕಾಲ ಎನ್ನಬಹುದು. ಇನ್ನು ಕೆಲವರು ಪ್ಲೇಗ್ ಬಂದ ಕಾಲ ಅಂತಲೂ ಇನ್ನು ಕೆಲವರು ಕೊರೊನಾ ಕಾಲವನ್ನು ಅತ್ಯಂತ ಕೆಟ್ಟ ವರ್ಷಗಳು ಎನ್ನಬಹುದು. ಆದರೆ ಇದೇ ಪ್ರಶ್ನೆಯನ್ನು ಇತಿಹಾಸಕಾರರಿಗೆ ಕೇಳಿದರೆ ಅವರು ಹೇಳುವುದು ಒಂದೇ ವರ್ಷವಾಗಿದೆ.
ಹೌದು ಭೂಮಿ ಮೇಲಿನ ಅತ್ಯಂತ ಕೆಟ್ಟ ವರ್ಷ ಯಾವುದು ಎಂದು ಕೇಳಿದರೆ ಇತಿಹಾಸಕಾರರು ಖಂಡಿತವಾಗಿ ಕ್ರಿ.ಶ 536 ಎಂದು ಉತ್ತರಿಸುತ್ತಾರೆ. ಹಾಗಾದರೆ ಈ ವರ್ಷ ಭೂಮಿ ಮೇಲೆ ಏನಾಯಿತು. ಈ ವರ್ಷವನ್ನು ಏಕೆ ಅತ್ಯಂತ ಕೆಟ್ಟ ವರ್ಷ ಎಂದು ಕರೆಯಲಾಗಿದೆ. ಇತಿಹಾಸಕಾರರು ಈ ದಿನವನ್ನು ಯಾವ ರೀತಿಯಲ್ಲಿ ನೆನೆಪು ಮಾಡಿಕೊಳ್ಳುತ್ತಾರೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
536 ರಲ್ಲಿ ಹಿಮಾಘಾತ
536ನೇ ವರ್ಷವು ಇಡೀ ಯೂರೋಪ್, ಮಧ್ಯ ಪ್ರಾಶ್ಚ್ಯ ದೇಶಗಳು ಹಾಗೂ ಏಷ್ಯಾ ಕೆಲಭಾಗಕ್ಕೆ ಅತ್ಯಂತ ಭಯಾನಕ ಮತ್ತು ದುರದೃಷ್ಟಕರ ವರ್ಷ ಎಂದು ನಂಬಲಾಗಿತ್ತು. ಏಕೆಂದರೆ ಈ ವರ್ಷದಲ್ಲಿಯೇ ಈ ಪ್ರಾಂತ್ಯಗಳು ಮಂಜಿನಿಂದ ಮುಚ್ಚಿಹೋಗಿದ್ದವು. ಅದೆಷ್ಟು ಮಂಜು ಮುಸುಕಿತ್ತು ಎಂದರೆ ಸುಮಾರು 18 ತಿಂಗಳುಗಳ ಕಾಲ ಸೂರ್ಯನನ್ನೇ ಜನರು ನೋಡಿರಲಿಲ್ಲವಂತೆ. 18 ತಿಂಗಳು ಸೂರ್ಯ ಕಾಣಿಸಲಿಲ್ಲ ಎಂದರೆ ಅಲ್ಲಿನ ಪರಿಸ್ಥಿತಿ ಹೇಗಾಗಿತ್ತು ಎಂಬುದನ್ನು ಊಹಿಸಲು ಸಹ ಸಾಧ್ಯವಿಲ್ಲ. ಮಧ್ಯ ಬೇಸಿಗೆಯ ಕಾಲದಲ್ಲೂ ತಾಪಮಾನ ಮೈನಸ್ ಡಿಗ್ರಿಗೆ ಇಳಿದಿತ್ತು.
ಮಂಜು ಕವಿದರೆ ಕೆಟ್ಟ ವರ್ಷ ಹೇಗೆ?
ನಿವಂದುಕೊಳ್ಳಬಹುದು ಮಂಜು ಕವಿದರೆ ಅದು ಅತ್ಯಂತ ಕೆಟ್ಟ ವರ್ಷ ಹೇಗಾಗುತ್ತದೆ ಎಂದು. ಆದರೆ ಮಂಜು ಕವಿದ ಈ 18 ತಿಂಗಳುಗಳಲ್ಲಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಕೃಷಿ ಕಾರ್ಯಗಳು ತಟಸ್ಥವಾಗಿ ಆಹಾರಕ್ಕೂ ಪರದಾಡಬೇಕಾಯಿತು. ಹಸಿವು ಮತ್ತು ಆರ್ಥಿಕ ಮುಗ್ಗಟ್ಟು ಯೂರೋಪ್ ಅನ್ನು ಕಾಡಿತ್ತು. ಹೀಗಾಗಿ ಈ ವರ್ಷವನ್ನು ಅತ್ಯಂತ ಕೆಟ್ಟ ಮತ್ತು ಬದುಕಲು ಅತ್ಯಂತ ಭಯಾನಕ ವರ್ಷ ಎಂದು ಪರಿಗಣಿಸಲಾಯಿತು.
ಇಲ್ಲಿಗೆ ನಿಲ್ಲಲಿಲ್ಲ ದುರದೃಷ್ಟಕರ ವರ್ಷದ ಕಾಟ
ಹಾರ್ವರ್ಡ್ ಯುನಿವರ್ಸಿಟಿ ಇನಿಶಿಯೇಟಿವ್ ಫಾರ್ ದಿ ಸೈನ್ಸ್ ಆಫ್ ದಿ ಹ್ಯೂಮನ್ ಪಾಸ್ಟ್ ಅನ್ನು ಮುನ್ನಡೆಸುವ ಮಧ್ಯಕಾಲೀನ ಇತಿಹಾಸಕಾರ ಮೈಕೆಲ್ ಮೆಕ್‌ಕಾರ್ಮಿಕ್ ಪ್ರಕಾರ, ಈ ವರ್ಷದಲ್ಲಿ ಸೂರ್ಯನ ಬೆಳಕು ಬೀಳದೆ ಹಸಿರು ಮರಗಳೇ ಮಾಯವಾಗಿದ್ದವಂತೆ. 536 ರ ಬೇಸಿಗೆಯಲ್ಲಿ, ತಾಪಮಾನವು 1.5 ರಿಂದ 2.5 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಯಿತು. ಇದಾದ ಬಳಿಕ 541ರಲ್ಲಿ, ಈಜಿಪ್ಟ್ ಸೇರಿ ಯೂರೋಪ್‌ನಲ್ಲಿ ಬುಬೊನಿಕ್ ಪ್ಲೇಗ್ ಕಾಣಿಸಿಕೊಂಡಿತು. ಈ ಮಾರಣಾಂತಿಕ ರೋಗವು ಅತ್ಯಂತ ವೇಗವಾಗಿ ಹರಡಿತು. ಹೀಗಾಗಿ ಈ ವರ್ಷವನ್ನು ಪ್ಲೇಗ್ ಆಫ್ ಜಸ್ಟಿನಿಯನ್ ಎಂದು ಕರೆಯಲಾಯಿತು. ಈ ರೋಗದಿಂದ ಪೂರ್ವ ರೋಮನ್ ಅಲ್ಲಿ ಒಟ್ಟು ಜನಸಂಖ್ಯೆಯ ಮೂರನೇ ಒಂದರಿಂದ ಒಂದುವರೆ ಭಾಗದಷ್ಟು ಮಂದಿ ಅಸುನೀಗಿದರು. ಇದು ಇಡೀ ಜಗತ್ತಿನಲ್ಲಿ ಮತ್ತೊಂದು ಸುತ್ತಿನ ಕತ್ತಲೆಯ ಭಯಕ್ಕೆ ಕಾರಣವಾಯಿತು.
ಜ್ವಾಲಾಮುಖಿ ಸ್ಫೋಟ
ಇದೇ ವರ್ಷದಲ್ಲಿ ಐಸ್‌ಲ್ಯಾಂಡ್‌ನಲ್ಲಿ ದುರಂತ ಜ್ವಾಲಾಮುಖಿ ಸ್ಫೋಟದಿಂದ ಉತ್ತರ ಗೋಳಾರ್ಧದಲ್ಲಿ ಬೂದಿಯನ್ನು ಬಿಡುಗಡೆ ಮಾಡಿತು ಎಂದು ತಂಡವು ಬಹಿರಂಗಪಡಿಸಿತು. 540 ಮತ್ತು 547ರಲ್ಲಿ ಎರಡು ಬೃಹತ್ ಸ್ಫೋಟಗಳು ಸಂಭವಿಸಿದವು. ಇದರ ಜೊತೆ ಒಂದರ ಹಿಂದೆ ಒಂದರಂತೆ ಜ್ವಾಲಾಮುಖಿ ಸ್ಪೋಟ ಸಂಭವಿಸಿತು. ಪ್ಲೇಗ್ ಏರಿಕೆಯಾಗಿ ಯೂರೋಪ್‌ನಲ್ಲಿ ಕತ್ತಲಯುಗ ಎಂದು ಕರೆಯಲ್ಪಡುವ ವರ್ಷಗಳು ಆರಂಭವಾಗಿದ್ದವು, ಇದು 640ರ ವರೆಗೂ ಮುಂದುವರೆಯಿತು.