ನವದೆಹಲಿ: ಲೋಕಸಭಾ ಚುನಾವಣೆಯ ಘೋಷಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ಹೊತ್ತಿನಲ್ಲಿ ಚುನಾವಣಾ ಆಯುಕ್ತ ಸ್ಥಾನಕ್ಕೆ ಅರುಣ್ ಗೋಯಲ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಚುನಾವಣಾ ಆಯೋಗದಲ್ಲಿ 'ಚುನಾವಣಾ ಆಯುಕ್ತ' ಹುದ್ದೆಯು ಎರಡನೆಯ ಅತ್ಯುನ್ನತ ಸ್ಥಾನ.
ಅವರು 2027ರ ಡಿಸೆಂಬರ್‌ವರೆಗೆ ಅಧಿಕಾರ ಅವಧಿಯನ್ನು ಹೊಂದಿದ್ದರು. ಅಲ್ಲದೆ, ಹಾಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಅವರು ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಿವೃತ್ತರಾದ ನಂತರ ಗೋಯಲ್ ಅವರೇ ಸಿಇಸಿ ಸ್ಥಾನಕ್ಕೆ ಬರುವವರಿದ್ದರು. ಗೋಯಲ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಅಂಗೀಕರಿಸಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯದ ಅಧಿಸೂಚನೆಯಲ್ಲಿ ಹೇಳಲಾಗಿದೆ.
ಗೋಯಲ್ ಅವರು ರಾಜೀನಾಮೆ ನೀಡಿರುವುದಕ್ಕೆ ಕಾರಣ ಏನು ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ಅವರು 1985ನೇ ಬ್ಯಾಚ್‌ನ, ಪಂಜಾಬ್ ಕೇಡರ್‌ನ ಐಎಎಸ್ ಅಧಿಕಾರಿ. ಅವರು 2022ರ ನವೆಂಬರ್‌ನಲ್ಲಿ ಚುನಾವಣಾ ಆಯುಕ್ತರಾಗಿ ನೇಮಕ ಆಗಿದ್ದರು.
ಚುನಾವಣಾ ಆಯೋಗದ ಸಮಿತಿಯಲ್ಲಿ ಮೂವರು ಸದಸ್ಯರು ಇರಬೇಕು. ಆದರೆ ಅನೂಪ್ ಪಾಂಡೆ ಅವರ ನಿವೃತ್ತಿ ಹಾಗೂ ಈಗ ಗೋಯಲ್ ಅವರ ರಾಜೀನಾಮೆಯ ಪರಿಣಾಮವಾಗಿ ಈಗ ರಾಜೀವ್ ಕುಮಾರ್ ಮಾತ್ರ ಇದ್ದಾರೆ.
'ಗೋಯಲ್ ಅವರು ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಬಾರದು ಎಂದು ಸರ್ಕಾರವು ಒತ್ತಾಯಿಸಿದರೂ ಅವರು ಒಪ್ಪಲಿಲ್ಲ. ರಾಜೀನಾಮೆ ನಿರ್ಧಾರಕ್ಕೆ ಅಂಟಿಕೊಂಡರು. ಆದರೆ ಅವರ ರಾಜೀನಾಮೆಗೆ ಆರೋಗ್ಯ ಸಮಸ್ಯೆ ಕಾರಣ ಅಲ್ಲ. ಅವರ ಆರೋಗ್ಯ ಚೆನ್ನಾಗಿಯೇ ಇದೆ' ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಹೊಸ ಚುನಾವಣಾ ಆಯುಕ್ತರ ನೇಮಕಕ್ಕೆ ಸರ್ಕಾರವು ಪ್ರಕ್ರಿಯೆ ಶುರು ಮಾಡಲಿದೆ ಎಂದು ಕೂಡ ಎನ್‌ಡಿಟಿವಿ ವರದಿ ಹೇಳಿದೆ.
'ಚುನಾವಣಾ ಆಯೋಗದ ಸಮಿತಿಯಲ್ಲಿ ಈಗ ಮುಖ್ಯ ಚುನಾವಣಾ ಆಯುಕ್ತರು ಮಾತ್ರ ಇದ್ದಾರೆ. ಮೋದಿ ನೇತೃತ್ವದ ಸರ್ಕಾರವು ಚುನಾವಣಾ ಆಯುಕ್ತರ ನೇಮಕಕ್ಕೆ ಹೊಸ ಕಾನೂನು ತಂದಿದೆ. ಅದರ ಪ್ರಕಾರ ಚುನಾವಣಾ ಆಯುಕ್ತರನ್ನು ಪ್ರಧಾನಿ ಮೋದಿ ಹಾಗೂ ಅವರ ಆಯ್ಕೆಯ ಒಬ್ಬರು ಸಚಿವರ ಮತ ಆಧರಿಸಿ ನೇಮಕ ಮಾಡಬಹುದು. ಹೀಗಾಗಿ, 2024ರ ಲೋಕಸಭಾ ಚುನಾವಣೆಗೂ ಮೊದಲು ಮೋದಿ ಅವರು ಮೂವರು ಚುನಾವಣಾ ಆಯುಕ್ತರ ಪೈಕಿ ಇಬ್ಬರನ್ನು ನೇಮಕ ಮಾಡಲಿದ್ದಾರೆ. ಇದು ಬಹಳ ಕಳವಳಕಾರಿ' ಎಂದು ತೃಣಮೂಲ ಕಾಂಗ್ರೆಸ್ ಮುಖಂಡ, ಸಂಸದ ಸಾಕೇತ್ ಗೋಖಲೆ 'ಎಕ್ಸ್' ವೇದಿಕೆಯಲ್ಲಿ ಬರೆದಿದ್ದಾರೆ.
ಸಿಇಸಿ ಹಾಗೂ ಇ.ಸಿ. ನೇಮಕಕ್ಕೆ ಸಂಬಂಧಿಸಿದ ಹೊಸ ಕಾನೂನಿನ ಪ್ರಕಾರ, ಕೇಂದ್ರ ಕಾನೂನು ಸಚಿವ ಹಾಗೂ ಕೇಂದ್ರದ ಇಬ್ಬರು ಕಾರ್ಯದರ್ಶಿಗಳು ಇರುವ ಶೋಧ ಸಮಿತಿಯು ಐದು ಜನರ ಹೆಸರನ್ನು ಅಂತಿಮಗೊಳಿಸುತ್ತದೆ. ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯು ಒಬ್ಬರ ಹೆಸರನ್ನು ಅಂತಿಮಗೊಳಿಸುತ್ತದೆ. ಆಯ್ಕೆ ಸಮಿತಿಯಲ್ಲಿ ಪ್ರಧಾನಿ ಮಾತ್ರವಲ್ಲದೆ, ಪ್ರಧಾನಿ ನೇಮಕ ಮಾಡುವ ಒಬ್ಬ ಕೇಂದ್ರ ಸಚಿವ (ಸಂಪುಟ ದರ್ಜೆ) ಮತ್ತು ಲೋಕಸಭೆಯ ವಿರೋಧ ಪಕ್ಷ ಅಥವಾ ಪ್ರತಿಪಕ್ಷಗಳ ಪೈಕಿ ಅತಿದೊಡ್ಡ ಪಕ್ಷದ ನಾಯಕ ಇರುತ್ತಾರೆ.
2020ರ ಆಗಸ್ಟ್‌ನಲ್ಲಿ ಅಶೋಕ್ ಲಾವಾಸಾ ಅವರು ಚುನಾವಣಾ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯಲ್ಲಿನ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೈಗೊಂಡ ಹಲವು ತೀರ್ಮಾನಗಳಿಗೆ ಭಿನ್ನ ನಿಲುವು ದಾಖಲಿಸಿದ್ದರು.