ಧಾರ್: ರಸ್ತೆ ಅಪಘಾತದಲ್ಲಿ ಸ್ನೇಹಿತನನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಅಪಘಾತ ನಡೆದ ಸ್ಥಳದಲ್ಲಿಯೇ ವಿಡಿಯೊ ಹೇಳಿಕೆ ಚಿತ್ರೀಕರಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಧಾರ್‌ನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕಾಂತಿ (28) ಎಂದು ಗುರುತಿಸಲಾಗಿದೆ.
ಇಂದೋರ್-ಅಹಮದಾಬಾದ್ ಹೆದ್ದಾರಿಯಲ್ಲಿ ಕಾಂತಿ ಹಾಗೂ ಆತನ ಸ್ನೇಹಿತ ನರ್ವೆ ಸಿಂಗ್ (29) ಪ್ರಯಾಣಿಸುತ್ತಿದ್ದ ಬೈಕ್‌ಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿತ್ತು. ಈ ವೇಳೆ ಸಿಂಗ್ ಮೃತಪಟ್ಟಿದ್ದರು. ಆದರೆ ಕಾಂತಿ ಬದುಕುಳಿದಿದ್ದರು ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಉಜ್ಜಯಿನಿಯಿಂದ ಝಬುವಾಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಸ್ನೇಹಿತನ ಸಾವಿನಿಂದ ಮನನೊಂದ ಕಾಂತಿ ಅಪಘಾತ ನಡೆದ ಸ್ಥಳದಲ್ಲಿಯೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ 'ನನ್ನ ಆಪ್ತ ಸ್ನೇಹಿತನ ಸಾವಿನಿಂದ ತುಂಬಾ ನೋವಾಗಿದೆ ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ವಿಡಿಯೊ ಹೇಳಿಕೆ ಚಿತ್ರೀಕರಿಸಿರುವುದಾಗಿಯೂ ಪೊಲೀಸರು ಮಾಹಿತಿ ನೀಡಿದ್ದಾರೆ.