ನವದೆಹಲಿ: ಇತ್ತೀಚೆಗೆ ಜಾರಿಗೆ ತಂದಿರುವ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರು (ನೇಮಕಾತಿ, ಕರ್ತವ್ಯದ ನಿಬಂಧನೆಗಳು ಮತ್ತು ಅಧಿಕಾರಾವಧಿ) ಮಸೂದೆ-2023ರ ಅಡಿಯಲ್ಲಿ ಕೇಂದ್ರ ಸರ್ಕಾರವು ಹೊಸ ಚುನಾವಣಾ ಆಯುಕ್ತರನ್ನು ನೇಮಕ ಮಾಡದಂತೆ ತಡೆ ಕೋರಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಹೊಸ ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
'ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದ ಮಾರ್ಗಸೂಚಿಗಳಿಗೆ ಬದ್ಧವಾಗಿರಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಜತೆಗೆ ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕ ಸೇರಿದಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯನ್ನು ನೇಮಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸುವಂತೆ ಠಾಕೂರ್ ಅರ್ಜಿಯಲ್ಲಿ ಕೋರಿದ್ದಾರೆ' ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ತಮ್ಮ ಸ್ಥಾನಕ್ಕೆ (ಶನಿವಾರ) ಹಠಾತ್ ರಾಜೀನಾಮೆ ನೀಡಿದ್ದಾರೆ. ಇನ್ನೊಬ್ಬ ಚುನಾವಣಾ ಆಯುಕ್ತ ಆಗಿದ್ದ ಅನೂಪ್ ಪಾಂಡೆ ಅವರು ಫೆಬ್ರುವರಿಯಲ್ಲಿ ನಿವೃತ್ತರಾಗಿದ್ದಾರೆ. ಈಗ ಚುನಾವಣಾ ಆಯೋಗದ ಸಮಿತಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಮಾತ್ರ ಇದ್ದಾರೆ.
ಗೋಯಲ್ ಅವರು ರಾಜೀನಾಮೆಗೆ ಕಾರಣ ಏನು ಎಂಬುದನ್ನು ಅಧಿಕೃತವಾಗಿ ಹೇಳಿಲ್ಲ. ಸರ್ಕಾರ ಅಥವಾ ಚುನಾವಣಾ ಆಯೋಗದ ಕಡೆಯಿಂದಲೂ ವಿವರಣೆ ಲಭ್ಯವಾಗಿಲ್ಲ. ಅವರು 2027ರ ಡಿಸೆಂಬರ್‌ವರೆಗೆ ಕರ್ತವ್ಯ ಅವಧಿ ಹೊಂದಿದ್ದರು. ಅಲ್ಲದೆ, ಗೋಯಲ್ ಅವರು ಮುಂದೆ ಮುಖ್ಯ ಚುನಾವಣಾ ಆಯುಕ್ತ ಆಗುವ ಸಾಧ್ಯತೆಯೂ ಇತ್ತು. ಚುನಾವಣಾ ಆಯೋಗದಲ್ಲಿ ಸಿಇಸಿ ಮಾತ್ರ ಇದ್ದಾರೆ ಎಂಬ ಕಾರಣಕ್ಕೆ ಆಯೋಗದ ಕರ್ತವ್ಯಗಳ ನಿರ್ವಹಣೆಗೆ ಕಾನೂನಿನ ತೊಡಕೇನೂ ಇಲ್ಲ. ಪಾಂಡೆ ಅವರ ನಿವೃತ್ತಿಯ ನಂತರ ಅವರ ಸ್ಥಾನಕ್ಕೆ ಇನ್ನೊಬ್ಬರನ್ನು ನೇಮಕ ಮಾಡಲು ಸರ್ಕಾರವು ತ್ವರಿತವಾಗಿ ಕ್ರಮ ಕೈಗೊಂಡಿರಲಿಲ್ಲ.