ನವದೆಹಲಿ: ಪೂರ್ವ ಲಡಾಖ್ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ರಾಜತಾಂತ್ರಿಕರ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆದಿದ್ದು, ಉಭಯ ದೇಶಗಳು ರಾಜತಾಂತ್ರಿಕ ಮತ್ತು ಸೇನಾ ಕಾರ್ಯವಿಧಾನಗಳ ಮೂಲಕ ನಿಯಮಿತ ಸಂಪರ್ಕ ಕಾಯ್ದುಕೊಳ್ಳಲು ಸಮ್ಮತಿಸಿವೆ.
ನವದೆಹಲಿ: ಪೂರ್ವ ಲಡಾಖ್ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ರಾಜತಾಂತ್ರಿಕರ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆದಿದ್ದು, ಉಭಯ ದೇಶಗಳು ರಾಜತಾಂತ್ರಿಕ ಮತ್ತು ಸೇನಾ ಕಾರ್ಯವಿಧಾನಗಳ ಮೂಲಕ ನಿಯಮಿತ ಸಂಪರ್ಕ ಕಾಯ್ದುಕೊಳ್ಳಲು ಸಮ್ಮತಿಸಿವೆ.
ಭಾರತ ಮತ್ತು ಚೀನಾ ನಡುವಿನ ಗಡಿ ವ್ಯವಹಾರ (ಡಬ್ಲ್ಯುಎಂಸಿಸಿ) ಸಮಾಲೋಚನೆ ಮತ್ತು ಸಮನ್ವಯ ಸಾಧಿಸುವ ಉದ್ದೇಶದಿಂದ ಬೀಜಿಂಗ್‌ನಲ್ಲಿ ಬುಧವಾರ 29ನೇ ಸುತ್ತಿನ ಉನ್ನತ ಮಟ್ಟದ ಸಭೆ ನಡೆಯಿತು.
'ಗಡಿಯಲ್ಲಿ ಸೇನಾ ವಾಪಸಾತಿ, ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಇರುವ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ಅಭಿಪ್ರಾಯಗಳು ವಿನಿಮಯವಾದವು' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪೂರ್ವ ಏಷ್ಯಾ) ಅವರು ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರು. ಚೀನಾದ ವಿದೇಶಾಂಗ ಸಚಿವಾಲಯದ ಗಡಿ ಮತ್ತು ಸಾಗರ ವಿಭಾಗದ ಮಹಾ ನಿರ್ದೇಶಕರು ಚೀನಾ ನಿಯೋಗವನ್ನು ಮುನ್ನಡೆಸಿದರು ಎಂದು ಪ್ರಕಟಣೆ ತಿಳಿಸಿದೆ.
'ಎರಡೂ ಕಡೆಯವರು ರಾಜತಾಂತ್ರಿಕ ಮತ್ತು ಸೇನಾ ಕಾರ್ಯವಿಧಾನಗಳ ಮೂಲಕ ಮಾತುಕತೆ ಮುಂದುವರಿಸಲು ಮತ್ತು ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಒಪ್ಪಂದಗಳು ಮತ್ತು ಶಿಷ್ಟಾಚಾರಗಳಿಗೆ ಅನುಗುಣವಾಗಿ ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಎತ್ತಿಹಿಡಿಯುವ ಅಗತ್ಯದ ಬಗ್ಗೆ ಸಮ್ಮತಿಸಿದರು' ಎಂದು ಅದು ಹೇಳಿದೆ.
'ಚಾಲ್ತಿಯಲ್ಲಿರುವ ಒಪ್ಪಂದಗಳು ಮತ್ತು ಮಾರ್ಗದರ್ಶಿ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಉಭಯ ದೇಶಗಳು ಒಪ್ಪಿಕೊಂಡಿದ್ದೇವೆ. ಗಡಿ ಪ್ರದೇಶದಲ್ಲಿ ಶಾಂತಿ ನೆಲೆಸಲು ಸಹಮತ ವ್ಯಕ್ತಪಡಿಸಲಾಗಿದೆ' ಎಂದು ಚೀನಾ ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಎರಡೂ ದೇಶಗಳ ವಿದೇಶಾಂಗ ವ್ಯವಹಾರ, ರಕ್ಷಣೆ, ವಲಸೆ ಮತ್ತು ಇತರ ಇಲಾಖೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.