ಕಾಸರಗೋಡು: ಜಿಲ್ಲೆಯ ವೆಳ್ಳರಿಕುಂಡು ತಾಲೂಕಿನ ಎಲ್ಲಾ ಪೆಟ್ರೋಲ್ ಪಂಪ್‍ಗಳಲ್ಲಿ ಗ್ರಾಹಕರಿಗಿರುವ ಸೌಲಭ್ಯಗಳನ್ನು ಕಡ್ಡಾಯವಾಗಿ ಅಳವಡಿಸಿರಬೇಕು ಎಂಬುದಾಗಿ ತಾಲೂಕು ನಾಗರಿಕ ಪೂರೈಕೆ ಅಧಿಕಾರಿಗಳು ತಿಳಿಸಿದ್ದಾರೆ. ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಕಿಟ್, ಫ್ರೀ ಏರ್, ಸುಸಜ್ಜಿತ ಶೌಚಗೃಹ, ಇಂಧನದ ಗುಣಮಟ್ಟವನ್ನು ಪರೀಕ್ಷಿಸುವ ಸೌಲಭ್ಯವನ್ನು ಕಡ್ಡಾಯವಾಗಿ ಹೊಂದಿರಬೇಕು. ಜೊತೆಗೆ ದೂರು ಪುಸ್ತಕ, ಮಾರಾಟ ಅಧಿಕಾರಿಯ ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಿರಬೇಕು. ನೊಸಿಲ್‍ನಿಂದ ಹೊರಬರುವ ಇಂಧನದ ನೈಜ ಪ್ರಮಾಣವನ್ನು ಪರಿಶೀಲಿಸಲು ಅಳತೆ ತೂಕ ಇಲಾಖೆ ಮುದ್ರೆ ಹೊಂದಿರುವ 5 ಲೀಟರ್‍ನ ಪಾತ್ರವನ್ನು ಹೊಂದಿರಬೇಕು, ಇದನ್ನು ಗ್ರಾಹಕರು ಆಗ್ರಹಿಸಿದಲ್ಲಿ ನೀಡಬೇಕು. ಈ ಎಲ್ಲ ಸವಲತ್ತು ಲಭ್ಯವಿರುವಿರುವುದಾಗಿ ಸೂಚಿಸುವ ಬೋರ್ಡನ್ನು ಗ್ರಾಹಕರಿಗೆ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು. ಎಲ್ಲಾ ಪಂಪ್‍ಗಳಲ್ಲಿಯೂ ಕಡ್ಡಾಯವಾಗಿ ಗ್ರಾಹಕರಿಗೆ ಬಿಲ್ ನೀಡಬೇಕು. ಇವುಗಳಲ್ಲಿ ಲೋಪ ಕಂಡುಬಂದರೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಪಂಪುಗಳಲ್ಲಿ ಕಾಲಾವಧಿಯುಳ್ಳ ಫಯರ್ ಎಕ್ಸ್ಟಿಂಗ್ವಿಶರ್‍ಗಳನ್ನು ಹೊಂದಿದ್ದು, ಇದನ್ನು ಕಾರ್ಯನಿರ್ವಹಿಸಲು ತಿಳಿದಿರುವ ನುರಿತ ನೌಕರರನ್ನೂ ಹೊಂದಿರಬೇಕು.
ತಪಾಸಣೆ ಅಂಗವಾಗಿ ವೆಳ್ಳರಿಕುಂಡು ಒಡೆಯಂಚಾಲಿಲ್ ಪೆಟ್ರೋಲ್ ಪಂಪ್‍ನಲ್ಲಿ ತಾಲೂಕು ಸಪ್ಲೈ ಆಫೀಸರ್ ರೇಷನಿಂಗ್ ಇನ್ಸ್‍ಪೆಕ್ಟರ್ ನೇತೃತ್ವದ ತಂಡ ಪರಿಶೀಲನೆ ನಡೆಸಿತು. ಪರಿಶೀಲನೆಯಲ್ಲಿ ತಾಲೂಕು ಸಪ್ಲೈ ಆಫೀಸರ್ ಟಿ.ಸಿ.ಸಜೀವನ್, ರೇಷನಿಂಗ್ ಇನ್ಸ್‍ಪೆಕ್ಟರ್ ಜಾಸ್ಮಿನ್ ಕೆ ಆಂಟನಿ, ಕೆ.ಸವಿದ್ ಕುಮಾರ್ ಭಾಗವಹಿಸಿದ್ದರು. ಪ್ರತಿ ಪೆಟ್ರೋಲ್ ಪಂಪುಗಳಿಗೂ ತೆರಳಿ ತಪಾಸಣೆ ನಡೆಸಿ ಈ ಬಗ್ಗೆ ವರದಿಯನ್ನು ಮೇಲಧಿಕಾರಿಗಳಿಗೆ ರವಾನಿಸಲಾಗುವುದು ಎಂದು ತಾಲೂಕು ಸಪ್ಲೈ ಅಧಿಕಾರಿ ಟಿ.ಸಿ ಸಜೀವನ್ ತಿಳಿಸಿದ್ದಾರೆ.