ನವದೆಹಲಿ: 'ಒಂದು ದೇಶ ಒಂದು ಚುನಾವಣೆ' ಸಾಧ್ಯತೆ ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿಯು ತನ್ನ ವರದಿಯನ್ನು ರಾಷ್ಟ್ರಪತಿಗೆ ಸಲ್ಲಿಸಿದ್ದು, ಏಕಕಾಲದಲ್ಲಿ ಚುನಾವಣೆ ನಡೆಸಲು ಸಂವಿಧಾನದಲ್ಲಿ ಅಗತ್ಯ ತಿದ್ದುಪಡಿ ತರುವುದು ಅವಶ್ಯಕ ಎಂದು ಅಭಿಪ್ರಾಯಪಟ್ಟಿದೆ.

ಅಕಾಲಿಕ ಚುನಾವಣೆಗಳು ದೇಶದಲ್ಲಿ ಅನಿಶ್ಚಿತತೆ ಹಾಗೂ ಅಸ್ಥಿರತೆ ಸೃಷ್ಟಿಸುತ್ತಿವೆ. ಇದರಿಂದ ಪೂರಕವ್ಯವಸ್ಥೆಯ ಕೊಂಡಿಯು ಕಳಚುತ್ತಿದೆ. ವ್ಯಾವಹಾರಿಕ ಹೂಡಿಕೆ ಹಾಗೂ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದೆ. ಇದು ನಾಗರಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಈ ಸಮಿತಿ ಹೇಳಿದೆ.
'ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವುದು ಮೊದಲ ಹಂತವಾಗಿದೆ. ಇದಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ತರಲು ರಾಜ್ಯಗಳ ಅನುಮತಿ ಅಗತ್ಯವಿಲ್ಲ. 2ನೇ ಹಂತದಲ್ಲಿ ನಗರಸಭೆ ಹಾಗೂ ಪಂಚಾಯ್ತಿಗಳ ಚುನಾವಣೆಗಳನ್ನೂ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳೊಂದಿಗೆ ಸೇರಿಸಲಾಗುವುದು. ಲೋಕಸಭೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆ ನಡೆದ 100 ದಿನಗಳ ಒಳಗಾಗಿ ಈ ಚುನಾವಣೆಗಳೂ ನಡೆಯುತ್ತವೆ. ಇದಕ್ಕೆ ರಾಜ್ಯಗಳ ಅರ್ಧದಷ್ಟು ಬಹುಮತದ ಅನುಮೋದನೆ ಅಗತ್ಯ' ಎಂದು ಹೇಳಲಾಗಿದೆ.
'ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಆಯಾ ರಾಜ್ಯಗಳ ವ್ಯಾಪ್ತಿಗೆ ಒಳಪಡುವುದರಿಂದ ಸಂವಿಧಾನದ ಶೆಡ್ಯೂಲ್‌ನ 6, ಭಾಗ 9 ಮತ್ತು 9ಎ ಹಾಗೂ 368(2) ವಿಧಿ ಅಡಿಯಲ್ಲಿ ರಾಜ್ಯ ಸರ್ಕಾರಗಳ ಅನುಮತಿ ಅಗತ್ಯ' ಎಂದು ವರದಿಯಲ್ಲಿ ಹೇಳಲಾಗಿದೆ.