ನವದೆಹಲಿ: ಅಣೆಕಟ್ಟುಗಳ ಸುರಕ್ಷತೆಗೆ ಕೆಲಸ ಮಾಡುವ ಕೇಂದ್ರವೊಂದನ್ನು ಆರಂಭಿಸಲು ('ಅಣೆಕಟ್ಟುಗಳ ಉತ್ಕೃಷ್ಟತೆಗಾಗಿನ ಅಂತರರಾಷ್ಟ್ರೀಯ ಕೇಂದ್ರ - ಐಸಿಇಡಿ) ಕೇಂದ್ರ ಜಲ ಆಯೋಗವು (ಸಿಡಬ್ಲ್ಯುಸಿ) ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.

ಒಪ್ಪಂದಕ್ಕೆ ಸೋಮವಾರ ಸಹಿ ಹಾಕಲಾಗಿದೆ ಎಂದು ಜಲ ಶಕ್ತಿ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಒಪ್ಪಂದವು ಹತ್ತು ವರ್ಷಗಳ ಅವಧಿಗೆ ಜಾರಿಯಲ್ಲಿ ಇರುತ್ತದೆ. ರಾಷ್ಟ್ರ ಮಟ್ಟದಲ್ಲಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಣೆಕಟ್ಟುಗಳ ರಕ್ಷಣೆಯ ವಿಚಾರದಲ್ಲಿ ಎದುರಾಗುವ ಸವಾಲುಗಳಿಗೆ ಐಸಿಇಡಿ ಕೇಂದ್ರವು ಪರಿಹಾರ ಹುಡುಕಲು ನೆರವಾಗಲಿದೆ ಎಂದು ಸಚಿವಾಲಯ ಹೇಳಿದೆ.
ಅಣೆಕಟ್ಟುಗಳ ಸುರಕ್ಷತೆಗೆ ಅಗತ್ಯವಿರುವ ಹತ್ತು ಹಲವು ಚಟುವಟಿಕೆಗಳನ್ನು ಐಸಿಇಡಿ ಕೇಂದ್ರವು ಕೈಗೆತ್ತಿಕೊಳ್ಳಲಿದೆ. ಅಣೆಕಟ್ಟುಗಳ ರಕ್ಷಣೆಯ ವಿಚಾರದಲ್ಲಿ ಮುಂದೆ ಪ್ರವರ್ಧಮಾನಕ್ಕೆ ಬರಬಹುದಾದ ವಲಯಗಳನ್ನು ಐಸಿಇಡಿ ವ್ಯಾಪ್ತಿಗೆ ಸೇರಿಸುವ ಆಯ್ಕೆಯನ್ನು ಸಚಿವಾಲಯವು ಮುಕ್ತವಾಗಿ ಇರಿಸಿಕೊಂಡಿದೆ.
ಕೇಂದ್ರದ ಸ್ಥಾಪನೆಗೆ ಜಲ ಶಕ್ತಿ ಸಚಿವಾಲಯವು ₹118.05 ಕೋಟಿ ಅನುದಾನ ಒದಗಿಸಲಿದೆ. ಕೇಂದ್ರದ ಚಟುವಟಿಕೆಗಳಲ್ಲಿ ಐಐಎಸ್‌ಸಿ ಸಂಸ್ಥೆಯು ಪ್ರಮುಖ ಪಾತ್ರವನ್ನು ನಿಭಾಯಿಸಲಿದೆ.