ಕೋಲ್ಕತ್ತ: ದೇಶದ ಮೊದಲ ನೀರಿನೊಳಗಿನ ಸುರಂಗ ಮಾರ್ಗದ ಮೆಟ್ರೊ ರೈಲು ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಿದೆ.
ಕೋಲ್ಕತ್ತ ಮೆಟ್ರೊದ ಎಸ್‌ಪ್ಲನೇಡ್-ಹೌರಾ ಮೈದಾನ ಸೆಕ್ಷನ್‌ನಲ್ಲಿ ನಿರ್ಮಿಸಲಾಗಿರುವ ಈ ಸುರಂಗ ಮಾರ್ಗದಲ್ಲಿ ಇಂದು ಪ್ರಯಾಣಿಕರು ಮೊದಲ ಬಾರಿ ಸಂಚಾರ ಮಾಡಿದರು.
ಮೆಟ್ರೊದಲ್ಲಿ ಪ್ರಯಾಣಿಸುವ ಮುನ್ನ ಜನರು ವಂದೇ ಭಾರತ್, ಭಾರತ್ ಮಾತಾಕಿ ಜೈ ಎನ್ನುವ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
520 ಮೀಟರ್ ಉದ್ದದ ಈ ಸುರಂಗ ಮಾರ್ಗದುದ್ದಕ್ಕೂ ನೀಲಿ ಬಣ್ಣದ ಎಲ್‌ಇಡಿ ಲೈಟ್‌ಗಳನ್ನು ಹಾಕಲಾಗಿತ್ತು.
'ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಕ್ಕೆ ಮೋದಿಯವರಿಗೆ ಧನ್ಯವಾದ' ಎಂದು ಪ್ರಯಾಣಿಕರೊಬ್ಬರು ಸಂತಸ ಹಂಚಿಕೊಂಡರು. 'ನೀರಿನೊಳಗೆ ಸಂಚರಿಸುವ ಮೆಟ್ರೊದಲ್ಲಿ ಪ್ರಯಾಣಿಸಲು ಉತ್ಸುಕನಾಗಿದ್ದೇನೆ' ಎಂದು ಇನ್ನೊಬ್ಬ ಪ್ರಯಾಣಿಕರು ಖುಷಿ ವ್ಯಕ್ತಪಡಿಸಿದರು.
ವಾರದ ದಿನಗಳಲ್ಲಿ ಪ್ರತಿ 12 ರಿಂದ 15 ನಿಮಿಷಕ್ಕೆ ಒಂದರಂತೆ ಈ ಮೆಟ್ರೊ ರೈಲು ಸಂಚರಿಸಲಿದೆ. ರಾತ್ರಿ 9.45ಕ್ಕೆ ದಿನದ ಕೊನೆಯ ರೈಲು ಸಂಚರಿಸಲಿದೆ.
ಮಾರ್ಚ್ 6 ರಂದು ಪ್ರಧಾನಿ ನರೇಂದ್ರ ಮೋದಿಯವರು ನೀರಿನೊಳಗಿನ ಸುರಂಗ ಮಾರ್ಗದ ಮೆಟ್ರೊವನ್ನು ಉದ್ಘಾಟಿಸಿದ್ದರು, ಬಳಿಕ ಶಾಲಾ ಮಕ್ಕಳೊಂದಿಗೆ ರೈಲಿನಲ್ಲಿ ಪ್ರಯಾಣ ನಡೆಸಿದ್ದರು.