ನವದೆಹಲಿ: ಹಿಂಸೆ ಪೀಡಿತ ಮಣಿಪುರದ ನಿರಾಶ್ರಿತರ ಕೇಂದ್ರದಲ್ಲಿ ವಾಸಿಸುತ್ತಿರುವವರಿಗೆ ಲೋಕಸಭೆ ಚುನಾವಣೆಗೆ ಅಲ್ಲಿಂದಲೇ ಮತದಾನ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಚುನಾವಣಾ ಆಯೋಗ ಶನಿವಾರ ಹೇಳಿದೆ.
ಈ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, 'ನಾವು ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸುತ್ತೇವೆ' ಎಂದು ಹೇಳಿದರು.
'ಶಿಬಿರದಿಂದಲೇ ಮತದಾನ ಮಾಡುವುದಕ್ಕೆ ವ್ಯವಸ್ಥೆ ಮಾಡಲಿದ್ದೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ವಲಸಿಗರಿಗೆ ಕಲ್ಪಿಸಿದ ವ್ಯವಸ್ಥೆಯಂತೆ ಮಣಿಪುರದಲ್ಲೂ ಮಾಡಲಾಗುವುದು' ಎಂದು ರಾಜೀವ್ ಕುಮಾರ್ ಹೇಳಿದರು.
'ಚುನಾವಣೆ ಪ್ರಕ್ರಿಯೆಯಲ್ಲಿ ಶಾಂತಿಯುತವಾಗಿ ಭಾಗಿಯಾಗಿ, ಬ್ಯಾಲೆಟ್ ಮೂಲಕ ನಿರ್ಧರಿಸಿ' ಎಂದು ಮತದಾರರಿಗೆ ಅವರು ಕರೆ ನೀಡಿದರು.
ಕಳೆದ ವರ್ಷ ಮೇ ತಿಂಗಳಿನಲ್ಲಿ ಮೈತೇಯಿ ಹಾಗೂ ಕುಕಿ ಜನಾಂಗದ ಮಧ್ಯೆ ಆರಂಭವಾದ ಸಂಘರ್ಷ ಈಗಲೂ ಮುಂದುವರಿದಿದೆ. ಸುಮಾರು 200 ಮಂದಿ ಸಾವಿಗೀಡಾಗಿದ್ದಾರೆ. 50 ಸಾವಿರ ಮಂದಿ ನಿರಾಶ್ರಿತರ ಶಿಬಿರಗಳಲ್ಲಿದ್ದಾರೆ.