ಇಸ್ಲಾಮಾಬಾದ್: ಸಿಂಧ್ ಪ್ರಾಂತ್ಯದ ಕೇಟಿ ಬಂದರ್‌ನಲ್ಲಿ ದೋಣಿ ಮಗುಚಿ 14 ಮೀನುಗಾರರು ನಾಪತ್ತೆಯಾಗಿದ್ದು. ಅವರ ಶವಗಳನ್ನು ವಶಕ್ಕೆ ಪಡೆಯಲು ಪಾಕಿಸ್ತಾನ ಸರ್ಕಾರವು ಭಾರತದ ನೆರವನ್ನು ಕೇಳುವ ಸಾಧ್ಯತೆ ಇದೆ.
ಸಿಂಧ್ ಪ್ರಾಂತ್ಯದ ಮಾಲಿರ್ ಜಿಲ್ಲೆಯ ಇಬ್ರಾಹಿಂ ಹೈದರ್ ಎಂಬ ಹಳ್ಳಿಯ 45 ಮೀನುಗಾರರು ಮೀನು ಹಿಡಿಯಲು ಸಾಗಿದ್ದರು.
ಕೇಟಿ ಬಂದರ್ ಬಳಿಯ ಹಿಜಾಂಕ್ರೊ ಹತ್ತಿರದ ನೀರಿನ ಕವಲು ಪ್ರದೇಶದಲ್ಲಿ ದೋಣಿಯು ಮಾರ್ಚ್ 5ರಂದು ಬೋರಲಾಯಿತು.
ಮೂವತ್ತೊಂದು ಮೀನುಗಾರರನ್ನು ರಕ್ಷಿಸಲಾಯಿತು. ಇತರೆ 14 ಮೀನುಗಾರರು ನಾಪತ್ತೆಯಾಗಿದ್ದಾರೆ.
ಪಾಕಿಸ್ತಾನದ ನೌಕಾಪಡೆ, ಕಡಲು ಭದ್ರತಾ ಪಡೆಗಳು ಹಾಗೂ ಇಧಿ ಫೌಂಡೇಷನ್‌ನವರು ರಕ್ಷಣಾ ಕಾರ್ಯ ನಡೆಸಿದರು. ಶನಿವಾರದವರೆಗೆ ಹುಡುಕಾಡಿದರೂ ನಾಪತ್ತೆಯಾದ 14 ಮಂದಿಯ ದೇಹಗಳು ಸಿಗಲಿಲ್ಲ.
ಭಾರತದ ನೆರವು ಪಡೆದು ನಾಪತ್ತೆಯಾಗಿರುವ ಮೀನುಗಾರರ ಶವಗಳನ್ನು ಹುಡುಕಿ ತರುವ ಭರವಸೆಯನ್ನು ಪ್ರಧಾನಿ ಶೆಹಬಾಜ್ ಷರೀಫ್ ನೀಡಿದ್ದಾರೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಶಾಸಕ ಅಘಾ ರಫಿಉಲ್ಲಾ ಹೇಳಿರುವುದಾಗಿ 'ದಿ ಡಾನ್' ಪತ್ರಿಕೆ ವರದಿ ಮಾಡಿದೆ.