ಮಂಗಳೂರು: 'ವಿದೇಶಗಳಿಂದ ಅಡಿಕೆ ಆಮದಾಗುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಧಾರಣೆ ತೀವ್ರ ಕುಸಿತ ಕಂಡಿದೆ. ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಅಡಿಕೆ ಆಮದು ನಿಷೇಧಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲೆಯ ರೈತ ಸಂಘಗಳ ಒಕ್ಕೂಟವು ಇದೇ 7ರಂದು ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಿದೆ' ಎಂದು ಒಕ್ಕೂಟದ ಪದಾಧಿಕಾರಿ ಓಸ್ವಾಲ್ಡ್ ಫರ್ನಾಂಡಿಸ್ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, 'ಇದೇ 7ರಂದು ಮಧ್ಯಾಹ್ನ 2 ಗಂಟೆಗೆ ಬಿ.ಸಿ. ರೋಡ್‌ನಿಂದ ಜಾಥಾ ಹೊರಡಲಿದೆ. ನಗರದ ಜಿಲ್ಲಾಧಿಕಾರಿ ಕಚೇರಿವರೆಗೆ ಬೆಳೆಗಾರರು ಟ್ರ್ಯಾಕ್ಟರ್ ಮತ್ತಿತರ ವಾಹನಗಳಲ್ಲಿ ಸಾಗಿಬರಲಿದ್ದಾರೆ. ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಲಿದ್ದೇವೆ' ಎಂದರು.
'ಅಡಿಕೆಯ ಎಲೆಚುಕ್ಕಿ ರೋಗ ಮತ್ತು ಹಳದಿ ಎಲೆ ರೋಗ ಮತ್ತು ತೆಂಗಿನ ಧಾರಣೆ ಕುಸಿತದಿಂದಾಗಿ ಸಮಸ್ಯೆಗೆ ಸಿಲುಕಿದ್ದೇವೆ. ಇದರ ಬೆನ್ನಲ್ಲೇ ಅಡಿಕೆ ಧಾರಣೆ ಕುಸಿತ ಉಂಟಾಗಿರುವುದು ನಮ್ಮನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ' ಎಂದು ಅಳಲು ತೋಡಿಕೊಂಡರು.
ದೆಹಲಿಯ ಗಡಿ ಪ್ರದೇಶದಲ್ಲಿ ಹೋರಾಟ ನಡೆಸುತ್ತಿರುವ ರೈತರ ಮೇಲಿನ ದೌರ್ಜನ್ಯವನ್ನು ಕೂಡಲೆ ನಿಲ್ಲಿಸಬೇಕು. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದೂ ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸನ್ನಿ ಡಿಸೋಜ, ಸದಸ್ಯ ಸಂಜೀವ ಸಫಲಿಗ ಭಾಗವಹಿಸಿದ್ದರು.
ರಾಜ್ಯದಲ್ಲಿ ತಲೆ ಎತ್ತಿದ ವಿದೇಶಿ ಅಡಿಕೆ ಮಾಫಿಯಾ
ಇಂಡೋನೇಷ್ಯಾ, ಬರ್ಮಾ, ಭೂತಾನ್, ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಅಡಿಕೆ ಭಾರತಕ್ಕೆ ಸಾಗಾಟ ಮಾಡಲಾಗುತ್ತಿದೆ. ಈಶಾನ್ಯ ಪ್ರದೇಶಗಳಿಂದ ಕಳಪೆ ಗುಣಮಟ್ಟದ ವಿದೇಶಿ ಅಡಿಕೆಗಳು ಭಾರತಕ್ಕೆ ಎಂಟ್ರಿ ಕೊಡುತ್ತಿವೆ. ಮಂಗಳೂರು ಏರ್ ಪೋರ್ಟ್ ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ ಮೂಲಕವೂ ವಿದೇಶಿ ಅಡಿಕೆ ಬರುತ್ತಿದೆ. ವಿದೇಶಿ ಅಡಿಕೆ ಬೇರೆ ಬೇರೆ ಮಾರ್ಗಗಳಲ್ಲಿ ದೇಶಕ್ಕೆ ನುಸುಳಿ ಏರ್ಪೋರ್ಟ್ ಮೂಲಕ ಮಂಗಳೂರು ಪ್ರವೇಶ ಮಾಡುತ್ತಿದೆ. ಕಸ್ಟಮ್ಸ್ ಸುಂಕ ರಹಿತವಾಗಿ ಶ್ರೀಲಂಕಾದಿಂದ ಅಡಿಕೆ ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಕೇಂದ್ರ ಅಡಿಕೆ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ ಆಪರೇಟಿವ್(ಕ್ಯಾಂಪ್ಕೊ) ಸಂಸ್ಥೆ ಪ್ರಧಾನಿಗೆ ಪತ್ರ ಬರೆದು ಅಕ್ರಮ ಆಮದು ತಡೆಗೆ ಮನವಿ ಮಾಡಿದೆ.
ಅಗರ್ತಲಾದಿಂದ 60 ಮೂಟೆಗಳಲ್ಲಿ 1,519 ಕೆ.ಜಿ ಕೆಂಪು ತಳಿಯ ಅಡಿಕೆ ವಿಮಾನ ನಿಲ್ದಾಣಕ್ಕೆ ಬಂದಿದೆ. ಅಕ್ರಮ ಅಡಿಕೆ ಅಮದಿನಿಂದ ಕರಾವಳಿಯ ಅಡಿಕೆ ಬೆಳೆಗಾರರು ಕಂಗೆಟ್ಟಿದ್ದಾರೆ. ಅಕ್ರಮ ಅಮದಿನಿಂದ ರಾಜ್ಯದಲ್ಲಿ ಸ್ಥಳೀಯ ಅಡಿಕೆಯ ಭರ್ಜರಿ ಬೆಲೆಯ ನಾಗಲೋಟಕ್ಕೆ ಬ್ರೇಕ್ ಬಿದ್ದಿದೆ. ಅಡಿಕೆ ಬೆಳೆಯನ್ನೇ ನಂಬಿಕೊಂಡ ಕರಾವಳಿಯ ಕೃಷಿಕರಿಗೆ ಭಾರೀ ಹೊಡೆತ ಬಿದ್ದಿದೆ. ಕೆಜಿಗೆ ರೂ.500 ಗಡಿ ದಾಟಿದ್ದ ಅಡಿಕೆ ಈಗ 300ಕ್ಕೆ ಇಳಿದಿದೆ.
ಕರಾವಳಿ ಭಾಗದ ಉತ್ತಮ ಗುಣಮಟ್ಟದ ಅಡಿಕೆಗೆ ಉತ್ತರ ಭಾರತದಲ್ಲಿ ತೀವ್ರ ಬೇಡಿಕೆ ಇದೆ. ಆದರೆ ಕಡಿಮೆ ಬೆಲೆಗೆ ಬರ್ಮಾ ಹಾಗೂ ಇತರೆ ದೇಶದಿಂದ ಅಡಿಕೆ ಆಮದು ಆಗುತ್ತಿದ್ದು ಕರಾವಳಿಯ ಅಡಿಕೆಯೊಂದಿಗೆ ಅದನ್ನು ಬೆರೆಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಬೆಲೆಯೊಂದಿಗೆ ಕರಾವಳಿಯ ಅಡಿಕೆಯ ಗುಣಮಟ್ಟವೂ ಕುಸಿಯುತ್ತಿದೆ. ಗುಣಮಟ್ಟ ವೈಪರಿತ್ಯದೊಂದಿಗೆ ಬೇಡಿಕೆಯೂ ಇಳಿಮುಖವಾಗುವ ಆತಂಕ ಎದುರಾಗಿದೆ. ಕೊರೊನಾ ಸಂದರ್ಭ ಅಡಿಕೆ ಆಮದು ಸ್ಥಗಿತವಾಗಿದ್ದ ಹಿನ್ನಲೆ ಅಡಿಕೆ ಬೆಲೆ ಧಿಡೀರ್ ಏರಿಕೆಯಾಗಿತ್ತು. ಬೆಲೆ ಏರಿಕೆ ಹಿನ್ನಲೆ ಬಹುಪಾಲು ಎಲ್ಲ ಭಾಗಗಳಲ್ಲಿಯೂ ಕೃಷಿಕರು ಅಡಿಕೆ ಬೆಳೆದಿದ್ದರು. ಆದರೆ ಸದ್ಯದ ಸ್ಥಿತಿಯಲ್ಲಿ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ.