ಉಪ್ಪಳ: ಪೈವಳಿಕೆ ಪಂಚಾಯಿತಿ ಅಧ್ಯಕ್ಷೆ ವಿರುದ್ಧ ಪ್ರಮುಖ ವಿರೋಧ ಪಕ್ಷ ಬಿಜೆಪಿ ಮಂಡಿಸಿದ ಅವಿಶ್ವಾಸ ಗೊತ್ತುವಳಿಯನ್ನು ಮುಸ್ಲಿಂಲೀಗ್ ಬೆಂಬಲಿಸಿದ ಪರಿಣಾಮ ಗೊತ್ತುವಳಿಗೆ ಸೋಲಾಗಿದ್ದು, ಪಂಚಾಯಿತಿಯಲ್ಲಿ ಸಇಪಿಎಂ ಅಧಿಕಾರ ಉಳಿಸಿಕೊಂಡಿದೆ.
ಇದೇ ಸಂದರ್ಭ ಬಿಜೆಪಿ ಬೆಂಬಲಿಸಿದ ಕಾಂಗ್ರೆಸ್ ಸದಸ್ಯನನ್ನು ಪಕ್ಷದಿಂದ ಅಮನತುಗೊಳಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ(ಡಿಸಿಸಿ) ಆದೇಶ ಹೊರಡಿಸಿದೆ. ಪಂಚಾಯಿತಿಯ 15ನೇ ವಾರ್ಡು ಸದಸ್ಯ, ಅವಿನಾಶ್ ಮಚಾದೋ ಅಮಾನತಾದ ಸದಸ್ಯ. ಇವರು ಪಂಚಾಯಿತಿಯಲ್ಲಿ ಕಾಂಗ್ರೆಸ್‍ನ ಏಕೈಕ ಸದಸ್ಯರಾಗಿದ್ದರು.
ಗ್ರಾಮ ಪಮಚಾಯಿತಿ ಅಧ್ಯಕ್ಷೆ, ಸಿಪಿಎಂನ ಜಯಂತಿ ಅವರು ಪಂಚಾಯಿತಿ ಅಭಿವೃದ್ಧಿಗೆ ಸಂಬಂಧಿಸಿ ಪಕ್ಷಪಾತತನ ತೋರುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಇವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಸೋಮವಾರ ನಡೆದ ಚರ್ಚೆಯ ನಂತರ ನಡೆದ ಮತದಾನದಲ್ಲಿ ಮುಸ್ಲಿಂಲೀಗಿನ ಇಬ್ಬರು ಸದಸ್ಯರು ಸಿಪಿಎಂ ಬೆಂಬಲಿಸಿ ಮತ ಚಲಾಯಿಸಿದ್ದರು. ಕಾಂಗ್ರೆಸ್‍ನ ಏಕ ಸದಸ್ಯ ಅವಿನಾಶ್ ಮಚಾದೋ ಬಿಜೆಪಿಯನ್ನು ಬೆಂಬಲಿಸಿ ಮತ ಚಲಾಯಿಸಿದ್ದರು.
ಒಟ್ಟು 19ಮಂದಿ ಸದಸ್ಯ ಬಲದ ಪಂಚಾಯಿತಿಯಲ್ಲಿ ಬಿಜೆಪಿ ಎಂಟು, ಸಿಪಿಎಂ ಏಳು, ಸಿಪಿಐ, ಕಾಂಗ್ರೆಸ್ ತಲಾ ಒಂದು, ಮುಸ್ಲಿಂ ಲೀಗ್ ಎರಡು ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸ್‍ನ ಏಕ ಸದಸ್ಯ ಬಿಜೆಪಿ ಬೆಂಬಲಿಸಿದ ಹಿನ್ನೆಲೆಯಲ್ಲಿ ಇವರನ್ನು ಪಕ್ಷದಿಮದ ಅಮಾನತುಗೊಳಿಸಲಾಗಿದ್ದು, ಪ್ರಸಕ್ತ ಕಾಂಗ್ರೆಸ್‍ಗೆ ಸದಸ್ಯರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಮುಸ್ಲಿಂ ಲೀಗ್ ಸದಸ್ಯರು ಸಿಪಿಎಂಗೆ ಬೆಂಬಲ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ರಾಷ್ಟ್ರಮಟ್ಟದಲ್ಲಿ ಸಿಪಿಎಂ-ಕಾಂಗ್ರೆಸ್ ಐಎನ್‍ಡಿಐಎ ಒಕ್ಕೂಟದಲ್ಲಿ ಜತೆಯಾಗಿದ್ದರೂ, ಕೇರಳದಲ್ಲಿ ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿದೆ. ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಕೇರಳದಲ್ಲಿ ಸಿಪಿಎಂ-ಕಾಂಗ್ರೆಸ್ ಪರಸ್ಪರ ಎದುರಾಳಿಗಳಾಗಿದ್ದು, ಕಾಂಗ್ರೆಸ್‍ನ ಮಿತ್ರಪಕ್ಷ ಮುಸ್ಲಿಂ ಲೀಗ್ ಸಿಪಿಎಂ ಬೆಂಬಲಿಸಿರುವುದು ಕಾಂಗ್ರೆಸ್‍ಗೆ ನುಂಗಲಾರದ ತುತ್ತಾಗಿದೆ.