ಜಿನೀವಾ: ಕಳೆದ ವರ್ಷದಲ್ಲಿ ವಿಶ್ವದಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಯು ದಾಖಲೆಯ ಮಟ್ಟದಲ್ಲಿ ಹೆಚ್ಚಾಗಿರುವುದನ್ನು ಉಲ್ಲೇಖಿಸಿರುವ ವಿಶ್ವ ಹವಾಮಾನ ಸಂಸ್ಥೆಯು ಜಾಗತಿಕ ತಾಪಮಾನ ಹೆಚ್ಚಳದ ವಿಚಾರವಾಗಿ ಗಂಭೀರ ಎಚ್ಚರಿಕೆ ನೀಡಿದೆ.
ಜಿನೀವಾ: ಕಳೆದ ವರ್ಷದಲ್ಲಿ ವಿಶ್ವದಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಯು ದಾಖಲೆಯ ಮಟ್ಟದಲ್ಲಿ ಹೆಚ್ಚಾಗಿರುವುದನ್ನು ಉಲ್ಲೇಖಿಸಿರುವ ವಿಶ್ವ ಹವಾಮಾನ ಸಂಸ್ಥೆಯು ಜಾಗತಿಕ ತಾಪಮಾನ ಹೆಚ್ಚಳದ ವಿಚಾರವಾಗಿ ಗಂಭೀರ ಎಚ್ಚರಿಕೆ ನೀಡಿದೆ.
ಭೂಮಿಯ ಮೇಲ್ಮೈ ಹಾಗೂ ಜಲರಾಶಿಯಲ್ಲಿನ ತಾಪಮಾನವು ಕೂಡ ದಾಖಲೆಯ ಮಟ್ಟದಲ್ಲಿ ಹೆಚ್ಚಳವಾಗಿದೆ, ನೀರ್ಗಲ್ಲುಗಳು ಕರಗುತ್ತಿವೆ ಎಂದು ಸಂಸ್ಥೆಯು ಉಲ್ಲೇಖಿಸಿದೆ.
2024ನೇ ಇಸವಿಯು ತಾಪಮಾನದ ವಿಚಾರವಾಗಿ ಹೊಸದೊಂದು ದಾಖಲೆಯನ್ನು ಸೃಷ್ಟಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಕೂಡ ಅದು ತಿಳಿಸಿದೆ.
ಭೂಮಂಡಲದ ತಾಪಮಾನದಲ್ಲಿನ ಏರಿಕೆಯು ಕೈಗಾರಿಕಾ ಕ್ರಾಂತಿಗೂ ಮೊದಲಿನ ಮಟ್ಟದ ತಾಪಮಾನಕ್ಕೆ ಹೋಲಿಸಿದರೆ 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರಬೇಕು ಎಂಬ ಗುರಿಯನ್ನು ತಲುಪುವುದು ಕಷ್ಟಕರ ಅನ್ನಿಸುತ್ತಿದೆ ಎಂದು ಸಂಸ್ಥೆ ಬಿಡುಗಡೆ ಮಾಡಿರುವ ವರದಿಯು ಹೇಳಿದೆ.
2023ರ ಮಾರ್ಚ್‌ನಿಂದ ಈ ವರ್ಷದ ಫೆಬ್ರುವರಿವರೆಗಿನ ಅವಧಿಯಲ್ಲಿ ಜಾಗತಿಕ ತಾಪಮಾನದಲ್ಲಿನ ಹೆಚ್ಚಳವು 1.5 ಡಿಗ್ರಿ ಸೆಲ್ಸಿಯಸ್ ಮಿತಿಯನ್ನು ಮೀರಿದ್ದು, 1.56 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ.
ಭೂಮಿಯು ತಾನು ಸಂಕಷ್ಟದಲ್ಲಿ ಇರುವುದಾಗಿ ಹೇಳುತ್ತಿದೆ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್ ಹೇಳಿದ್ದಾರೆ.
ಎಲ್-ನಿನೊ ನಂತರದ ಇಸವಿಯಲ್ಲಿ ಸಾಮಾನ್ಯವಾಗಿ ಹೆಚ್ಚಿನ ತಾಪಮಾನ ದಾಖಲಾಗುತ್ತದೆ. 2024ನೇ ಇಸವಿಯು ಅತ್ಯಂತ ಹೆಚ್ಚು ತಾಪಮಾನದ ವರ್ಷ ಆಗಲಿದೆ ಎಂದು ಖಚಿತವಾಗಿ ಹೇಳಲಾಗದು. ಆದರೆ 2024ರಲ್ಲಿ ತಾಪಮಾನವು 2023ರ ದಾಖಲೆಯನ್ನು ಮುರಿಯುವ ಸಾಧ್ಯತೆ ಹೆಚ್ಚಿದೆ. ಯಾವುದಕ್ಕೂ ಕಾದುನೋಡಬೇಕು ಎಂದು ಸಂಸ್ಥೆಯ ಮುಖ್ಯಸ್ಥ ಒಮರ್ ಬೆದೌರ್ ಹೇಳಿದ್ದಾರೆ.