ಜೆರುಸಲೇಂ: ಇಸ್ರೇಲ್‌ನ ಉತ್ತರ ಗಡಿ ಭಾಗವಾದ ಮಾರ್ಗಲಿಯೂಟ್ ಪ್ರದೇಶದ ಮೇಲೆ ಉಗ್ರರು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ವ್ಯಕ್ತಿ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಕೇರಳದ ಕೊಲ್ಲಂನ ಪಟ್ನಿಬಿನ್ ಮ್ಯಾಕ್ಸ್‌ವೆಲ್ (31) ಎಂದು ಗುರುತಿಸಲಾಗಿವೆ. ಈ ದಾಳಿಯಲ್ಲಿ ಒಟ್ಟಾರೆ ಏಳು ಮಂದಿ ಗಾಯಗೊಂಡಿದ್ದಾರೆ.
ಪಟ್ನಿಬಿನ್ ಮ್ಯಾಕ್ಸ್‌ವೆಲ್ ಅವರು ಗರ್ಭಿಣಿ ಪತ್ನಿ ಹಾಗೂ 5 ವರ್ಷದ ಮಗಳನ್ನು ಅಗಲಿದ್ದಾರೆ. ಎರಡು ವರ್ಷಗಳ ಹಿಂದಷ್ಟೆ ಅವರು ಉದ್ಯೋಗಕ್ಕಾಗಿ ಪತ್ನಿ, ಮಗಳೊಂದಿಗೆ ಇಸ್ರೇಲ್‌ಗೆ ತೆರಳಿದ್ದರು.
ಇಸ್ರೇಲ್‌ನ ಉತ್ತರ ಭಾಗವಾದ ಮಾರ್ಗಲಿಯೂಟ್ ಕೃಷಿ ಪ್ರದೇಶವಾಗಿದ್ದು, ಕೃಷಿಕರೇ ಹೆಚ್ಚಾಗಿ ನೆಲೆಸಿದ್ದಾರೆ. ಈ ಪ್ರದೇಶದ ಮೇಲೆ ಸೋಮವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಹಿಜ್ಬುಲ್ಲಾ ಉಗ್ರರು ಲೆಬನಾನ್ ಕಡೆಯಿಂದ ಕ್ಷಿಪಣಿ ದಾಳಿ ನಡೆಸಿದ್ದರು ಎಂದು ರಕ್ಷಣಾ ಸೇವೆಗಳ ವಕ್ತಾರ ಜಾಕಿ ಹೆಲ್ಲರ್ ಹೇಳಿದ್ದಾರೆ.
ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟ ಪಟ್ನಿಬಿನ್ ಮ್ಯಾಕ್ಸ್‌ವೆಲ್ ಅವರ ದೇಹವನ್ನು ಝಿವ್ ಆಸ್ಪತ್ರೆಯಲ್ಲಿ ಇಡಲಾಗಿದೆ.
ಆಘಾತವಾಗಿದೆ: ಪಟ್ನಿಬಿನ್ ನಿಧನದ ಸುದ್ದಿ ಕೇಳಿ ನನಗ ತೀವ್ರ ಆಘಾತವಾಗಿದೆ ಎಂದು ಪಟ್ನಿಬಿನ್ ಅವರ ತಂದೆ ಪಾಥ್ರೋಸ್ ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
ಸೋಮವಾರ ಸಂಜೆ ನನ್ನ ಸೊಸೆ ಕರೆ ಮಾಡಿ, ಪಟ್ನಿಬಿನ್ ಕ್ಷಿಪಣಿ ದಾಳಿಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು. ಆದರೆ ರಾತ್ರಿ 12.45ರ ಸುಮಾರಿಗೆ ಪಟ್ನಿಬಿನ್ ನಿಧನರಾಗಿದ್ದಾರೆ ಎಂಬ ಖಚಿತವಾದ ಮಾಹಿತಿ ಸಿಕ್ಕಿತು ಎಂದು ಹೇಳಿದರು.
ಪಟ್ನಿಬಿನ್‌ಗೆ ಐದು ವರ್ಷದ ಹೆಣ್ಣು ಮಗಳು ಹಾಗೂ 7 ತಿಂಗಳ ಗರ್ಭಿಣಿ ಪತ್ನಿ ಇದ್ದಾರೆ ಎಂದರು. ಇನ್ನೂ ನಾಲ್ಕೈದು ದಿನಗಳಲ್ಲಿ ಪಟ್ನಿಬಿನ್ ಮೃತದೇಹ ಕೇರಳಕ್ಕೆ ಬರಬಹುದು ಎಂದರು.