ಗುವಾಹಟಿ: ಅಪ್ರಾಪ್ತ ಮನೆಯ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅಸ್ಸಾಂನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಭಾನುವಾರ ಬಂಧಿಸಲಾಗಿದೆ.
ಗೋಲಘಾಟ್ ಜಿಲ್ಲೆಯ ಲಚಿತ್ ಬೊರ್ಫುಕನ್ ಪೊಲೀಸ್ ಅಕಾಡೆಮಿಯಲ್ಲಿ(ಎಲ್‌ಬಿಪಿಎ) ನಿಯೋಜಿಸಲಾಗಿದ್ದ ಪೊಲೀಸರು ಉಪ ವರಿಷ್ಠಾಧಿಕಾರಿ(ಡಿಎಸ್‌ಪಿ) ಕಿರಣ್ ನಾಥ್ ಅವರನ್ನು ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಭಾನುವಾರ ಸಂಜೆ ವಶಕ್ಕೆ ತೆಗೆದುಕೊಳ್ಳಲಾಗಿದೆ.
15 ವರ್ಷದ ಬಾಲಕಿ, ಪೊಲೀಸ್ ಅಧಿಕಾರಿ ತನ್ನ ಮೇಲೆ ಅನೇಕ ಸಂದರ್ಭಗಳಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ತನ್ನನ್ನು ಮನೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಬಾಲಕಿಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದಾಗ ವಿಷಯ ಬೆಳಕಿಗೆ ಬಂದಿದೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 376 (ಲೈಂಗಿಕ ದೌರ್ಜನ್ಯ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕಿರಣ್ ನಾಥ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಜಿಪಿ ಸಿಂಗ್ ಹೇಳಿದ್ದಾರೆ.