HEALTH TIPS

ಭಾರತ ರಾಷ್ಟ್ರವಾಗಿರಲೇ ಇಲ್ಲ: ವಿವಾದಕ್ಕೆ ತಿರುಗಿದ ಡಿಎಂಕೆ ಮುಖಂಡ ರಾಜಾ ಹೇಳಿಕೆ

              ಚೆನ್ನೈ/ನವದೆಹಲಿ: ಡಿಎಂಕೆ ಪಕ್ಷದ ಮುಖಂಡ ಎ. ರಾಜಾ ಅವರು 'ಭಾರತವು ಎಂದಿಗೂ ರಾಷ್ಟ್ರವಾಗಿರಲಿಲ್ಲ; ಅದು ಹಲವು ಸಂಸ್ಕೃತಿಗಳ ಒಂದು ಉಪಖಂಡ' ಎಂದು ಹೇಳಿದ್ದಾರೆ ಎನ್ನಲಾದ ವಿಡಿಯೊ ಒಂದನ್ನು ವಿರೋಧ ಪಕ್ಷಗಳು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿವೆ. ಈ ವಿಡಿಯೊ ರಾಜಕೀಯ ವಿವಾದ ಸೃಷ್ಟಿಸಿದೆ.

               ರಾಜಾ ಅವರ ಮಾತುಗಳು 'ದ್ವೇಷ ಭಾಷಣ' ಎಂದು ಬಿಜೆಪಿ ಕರೆದಿದೆ, ರಾಜಾ ಅವರ ಬಂಧನಕ್ಕೆ ಒತ್ತಾಯಿಸಿದೆ. ಡಿಎಂಕೆ ಪಕ್ಷದ ಮಿತ್ರಪಕ್ಷವಾಗಿರುವ ಕಾಂಗ್ರೆಸ್ ಕೂಡ ರಾಜಾ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದೆ. ಮಾತನಾಡುವಾಗ ಎಲ್ಲರೂ ಸಂಯಮವಹಿಸಬೇಕು ಎಂದು ಕಿವಿಮಾತು ಹೇಳಿದೆ.

                 ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳು ಜೈಲಿನಿಂದ ಹೊರಬಂದಾಗ ಬಿಜೆಪಿಯ ಕಾರ್ಯಕರ್ತರು 'ಜೈ ಶ್ರೀರಾಮ್' ಎಂದು, 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗಿ ಅವರನ್ನು ಸ್ವಾಗತಿಸಿದ್ದರು ಎಂದು ರಾಜಾ ಅವರು ಈ ವಿಡಿಯೊದಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಹೀಗೆ ಮಾಡುವುದಕ್ಕೆ ಅವರಿಗೆ (ಬಿಜೆಪಿ ಕಾರ್ಯಕರ್ತರಿಗೆ) ನಾಚಿಕೆ ಆಗಲಿಲ್ಲವೇ ಎಂದು ರಾಜಾ ಪ್ರಶ್ನಿಸಿದ್ದಾರೆ.

'ಜೈ ಶ್ರೀರಾಮ್, ಭಾರತ್ ಮಾತಾ ಕಿ ಜೈ ಘೋಷಣೆಗಳು ಮೂಲಭೂತವಾದದ ಅರ್ಥ ನೀಡುತ್ತವೆ ಎಂದಾದರೆ ಆ ಜೈ ಶ್ರೀರಾಮ್‌ ಮತ್ತು ಭಾರತ ಮಾತೆಯನ್ನು ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ, ತಮಿಳುನಾಡು ಅದನ್ನು ಎಂದಿಗೂ ಒಪ್ಪುವುದಿಲ್ಲ' ಎಂದು ರಾಜಾ ಹೇಳಿದ್ದಾರೆ.

              ಈ ಹೇಳಿಕೆಗಾಗಿ ತಮ್ಮನ್ನು 'ರಾಮನ ವಿರೋಧಿ' ಎಂದು ಕರೆದರೂ ತಾವಾಗಲಿ ತಮ್ಮ ಪಕ್ಷವಾಗಲಿ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ರಾಜಾ ಹೇಳಿದ್ದಾರೆ.

                 ವಿಡಿಯೊದಲ್ಲಿ ರಾಜಾ ಅವರು ಪಕ್ಷದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ್ದಾರೆ. 'ಭಾರತವು ಒಂದು ರಾಷ್ಟ್ರವಲ್ಲ. ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ಭಾರತವು ಎಂದಿಗೂ ಒಂದು ರಾಷ್ಟ್ರವಾಗಿರಲಿಲ್ಲ. ಒಂದು ರಾಷ್ಟ್ರವೆಂದರೆ ಒಂದು ಭಾಷೆ, ಒಂದು ಸಂಪ್ರದಾಯ, ಒಂದು ಸಂಸ್ಕೃತಿ ಇರುತ್ತದೆ. ಅಂತಹ ಲಕ್ಷಣಗಳಿದ್ದರೆ ಮಾತ್ರ ರಾಷ್ಟ್ರ' ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.

                   'ತಮಿಳು ಎಂಬುದು ಒಂದು ರಾಷ್ಟ್ರ, ಒಂದು ದೇಶ. ಮಲಯಾಳವು ಒಂದು ಭಾಷೆ, ಒಂದು ರಾಷ್ಟ್ರ ಮತ್ತು ಒಂದು ದೇಶ. ಒಡಿಯಾ ಒಂದು ರಾಷ್ಟ್ರ, ಒಂದು ಭಾಷೆ ಮತ್ತು ಒಂದು ದೇಶ. ಇಂತಹ ಎಲ್ಲ ರಾಷ್ಟ್ರೀಯ ಗುಂಪುಗಳು ಸೇರಿ ಭಾರತ ಆಗುತ್ತದೆ. ಹೀಗಾಗಿ ಭಾರತವು ದೇಶವಲ್ಲ, ಇದು ಹಲವು ಆಚರಣೆಗಳು, ಸಂಪ್ರದಾಯಗಳು ಮತ್ತು ಸಂಸ್ಕೃತಿಗಳು ಇರುವ ಉಪಖಂಡ' ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.

              ತಮಿಳುನಾಡು, ಕೇರಳ, ದೆಹಲಿ ಮತ್ತು ಒಡಿಶಾದಂತಹ ರಾಜ್ಯಗಳಲ್ಲಿ ಅವುಗಳದೇ ಆದ ಸ್ಥಳೀಯ ಸಂಸ್ಕತಿ ಇದೆ ಎಂದು ಅವರು ಹೇಳಿದ್ದಾರೆ.

                'ಮಣಿಪುರದಲ್ಲಿ ನಾಯಿ ಮಾಂಸ ಸೇವಿಸಲಾಗುತ್ತದೆ, ಅದು ಸಾಂಸ್ಕೃತಿಕ ವಿಚಾರ. ಕಾಶ್ಮೀರದಲ್ಲಿ ಒಂದು ಸಂಸ್ಕೃತಿ ಇದೆ. ಪ್ರತಿ ಸಂಸ್ಕೃತಿಗೂ ಮಾನ್ಯತೆ ನೀಡಬೇಕು. ಸಮುದಾಯವೊಂದು ಗೋಮಾಂಸ ಸೇವಿಸಿದರೆ ಅದಕ್ಕೆ ಮಾನ್ಯತೆ ನೀಡಿ. ನಿಮಗೆ ಏನು ಸಮಸ್ಯೆ? ಅವರು ನಿಮಗೆ ಅದನ್ನು ತಿನ್ನಲು ಹೇಳಿದ್ದಾರೆಯೇ? ಹೀಗಾಗಿ, ವಿವಿಧತೆಯಲ್ಲಿ ಏಕತೆ. ನಮ್ಮಲ್ಲಿ ಭಿನ್ನತೆಗಳು ಇವೆ ಮತ್ತು ಅದನ್ನು ಒಪ್ಪಿಕೊಳ್ಳಬೇಕು' ಎಂದಿದ್ದಾರೆ.

                  ಈ ವಿಡಿಯೊವನ್ನು ಎಕ್ಸ್‌ ಮೂಲಕ ಹಂಚಿಕೊಂಡಿರುವ ಬಿಜೆಪಿಯ ಐ.ಟಿ. ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು, 'ಡಿಎಂಕೆಯವರ ದ್ವೇಷದ ಮಾತುಗಳು ಎಗ್ಗಿಲ್ಲದೆ ಮುಂದುವರಿದಿವೆ. ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ನಿರ್ಮೂಲಗೊಳಿಸಲು ಕರೆ ನೀಡಿದ ನಂತರ ಎ. ರಾಜಾ ಅವರು ಭಾರತವನ್ನು ಒಡೆಯಲು ಕರೆನೀಡಿದ್ದಾರೆ. ಅವರು ಭಗವಾನ್ ರಾಮನನ್ನು ಹೀಗಳೆದಿದ್ದಾರೆ, ಮಣಿಪುರದ ಜನರ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ, ಭಾರತವೆಂಬ ರಾಷ್ಟ್ರದ ಪರಿಕಲ್ಪನೆಯನ್ನು ಪ್ರಶ್ನಿಸಿದ್ದಾರೆ' ಎಂದು ಕಿಡಿಕಾರಿದ್ದಾರೆ.

ರಾಜಾ ಅವರನ್ನು ಬಂಧಿಸಬೇಕು ಎಂದು ತಮಿಳುನಾಡು ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ ಆಗ್ರಹಿಸಿದ್ದಾರೆ.

                  ರಾಜಾ ಅವರು ಕಂಬ ರಾಮಾಯಣದ ಸಾಲುಗಳನ್ನು ಉಲ್ಲೇಕಿಸಿ, ರಾಮನು ಭ್ರಾತೃತ್ವ ಮತ್ತು ಸೌಹಾರ್ದಕ್ಕೆ ಹೆಸರಾದವನು ಎಂದು ಹೇಳಿದ್ದಾರೆ. ರಾಮನು ಜಾತಿ ಮತ್ತು ಪಂಗಡಗಳ ಸಂಕುಚಿತ ಚೌಕಟ್ಟುಗಳನ್ನು ಮೀರಿದ್ದು ಎಂದು ಕಂಬ ರಾಮಾಯಣ ಹೇಳುತ್ತದೆ ಎಂದಿದ್ದಾರೆ.

ಈ ಕಾರಣಕ್ಕಾಗಿ ಬಲಪಂಥೀಯ ಶಕ್ತಿಗಳು ಬಳಸುವ 'ಜೈ ಶ್ರೀರಾಮ್' ಘೋಷಣೆಯನ್ನು ರಾಜಕೀಯ ಆಲಂಕಾರಿಕ ಮಾತುಗಳನ್ನಾಗಿ ಕಂಡು, ತಿರಸ್ಕರಿಸಬೇಕು ಎಂದು ರಾಜಾ ಹೇಳಿದ್ದಾರೆ.

ಹಿಂಡನ್‌ಬರ್ಗ್‌ ವರದಿ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಬಿಬಿಸಿ ಸಿದ್ಧಪಡಿಸಿದ ಸಾಕ್ಷ್ಯಚಿತ್ರದ ಬಗ್ಗೆ ಬಿಜೆಪಿ ಬಳಿ ಉತ್ತರವಿಲ್ಲ. ಅವರಲ್ಲಿ ಇರುವ ಒಂದೇ ಉತ್ತರ 'ಜೈ ಶ್ರೀರಾಮ್' ಮತ್ತು 'ಭಾರತ್ ಮಾತಾ ಕಿ ಜೈ' ಎಂದು ರಾಜಾ ಅವರು ವಿಡಿಯೊದಲ್ಲಿ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries