ಕಾಸರಗೋಡು: ಕೇಂದ್ರ, ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ತಮ್ಮ ಅಧಿಕೃತ ಸ್ಥಾನವನ್ನು ಬಳಸಿಕೊಂಡು ಚುನಾವಣಾ ಪ್ರಚಾರ ನಡೆಸುವುದು ಮಾದರಿ ನೀತಿ ಸಂಹಿತೆಯ ಪ್ರಕಾರ ನಿಯಮ ಉಲ್ಲಂಘನೆಯಾಗಿದ್ದು, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ. ಇನ್‍ಬಾಶೇಖರ್ ತಿಳಿಸಿದ್ದಾರೆ.
ಪತ್ರಿಕೆಗಳಲ್ಲಿ ಮತ್ತು ಇತರ ಮಾಧ್ಯಮಗಳಲ್ಲಿ ಸಾರ್ವಜನಿಕ ಖಜಾನೆಯ ವೆಚ್ಚದಲ್ಲಿ ಜಾಹೀರಾತುಗಳು, ರಾಜಕೀಯ ಸುದ್ದಿಗಳು, ಸಾಧನೆಗಳ ಪ್ರಚಾರ ಮತ್ತು ಪಕ್ಷದ ಭವಿಷ್ಯವನ್ನು ಸುಧಾರಿಸುವುದಕ್ಕಾಗಿ ಪಕ್ಷಪಾತ ಹೇಳಿಕೆಗಳು ಮತ್ತು ಚುನಾವಣಾ ಸಮಯದಲ್ಲಿ ಅಧಿಕೃತ ಮಾಧ್ಯಮಗಳನ್ನು ದುರುಪಯೋಗ ಪಡಿಸುವುದು ನೀತಿ ಸಂಹಿತೆಯ ವ್ಯಾಪ್ತಿಗೆ ಒಳಪಡುತ್ತದೆ. ಆದರೆ ಕುಟುಂಬ ಯೋಜನೆ, ಸಮಾಜ ಕಲ್ಯಾಣ ಯೋಜನೆಗಳು ಇತ್ಯಾದಿಗಳ ಬಗ್ಗೆ ಸಾಮಾನ್ಯ ಮಾಹಿತಿ ಅಥವಾ ಸಾಮಾನ್ಯ ಸಂದೇಶಗಳನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶಕ್ಕಾಗಿ ಸರಕಾರ ನಿರ್ಮಿಸಿದ ಹೋಡಿರ್ಂಗ್‍ಗಳು, ಜಾಹೀರಾತುಗಳು ಇತ್ಯಾದಿಗಳ ಪ್ರದರ್ಶನಕ್ಕೆ ಅನುಮತಿ ಇರಲಿದೆ.
ಯಾವುದೇ ರಾಜಕೀಯ ಪಕ್ಷದ ನಾಯಕರ ಸ್ವಾಭಿಮಾನ ಅಥವಾ ವ್ಯಕ್ತಿ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾರ್ವಜನಿಕ ಖಜಾನೆಯಿಂದ ಖರ್ಚು ಮಾಡುವುದು ಅಥವಾ ಸ್ವೀಕರಿಸುವುದು ಮತ್ತು ಸಾರ್ವಜನಿಕ ವೆಚ್ಚದಲ್ಲಿ ವೈಯಕ್ತಿಕ ಯಾ ಪಕ್ಷದ ಚುನಾವಣಾ ಪ್ರಚಾರಕ್ಕಾಗಿ ಖರ್ಚು ಮಾಡುವುದು ಅಪರಾಧವೆಂದು ಪರಿಗಣಿಸಲಾಗುವುದು.
ಚುನಾವಣ ಸಂದರ್ಭದಲ್ಲಿ ಸಾರ್ವಜನಿಕ ಖಜಾನೆಯ ಹಣ ಖರ್ಚು ಮಾಡಿ ದಿನಪತ್ರಿಕೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಸೇರಿದಂತೆ ಇತರ ಮಾಧ್ಯಮಗಳಲ್ಲಿ ರಾಜಕೀಯ ಸುದ್ದಿ ಪ್ರಕಟಿಸುವವರ ವಿರುದ್ಧ ಹಾಗೂ ಚುನಾವಣಾ ಸಂದರ್ಭದಲ್ಲಿ ಸರಕಾರದ ಸಾಧನೆಗಳನ್ನು ಪ್ರಸ್ತಾಪಿಸಿ ಮಾಧ್ಯಮ ಹಾಗೂ ಜನರಲ್ಲಿ ತಪ್ಪು ತಿಳುವಕೆಯನ್ನು ನೀಡುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯ ವ್ಯಾಪ್ತಿಯಲ್ಲಿ ಬರುತ್ತದೆ. ಇದರ ವಿರುದ್ಧವು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.