ಕಾಸರಗೋಡು: ರೈಲು ಪ್ರಯಾಣದ ಮಧ್ಯೆ ಎರಡು ಪ್ರತ್ಯೇಕ ದುರಂತದಲ್ಲಿ ವಿದ್ಯಾರ್ಥಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಕಣ್ಣೂರು ಕೂತುಪರಂಬ ಸರ್ಕಾರಿ ಆಸ್ಪತ್ರೆ ಸನಿಹದ ನಿವಾಸಿ, ಮಂಗಳೂರು ಪಿ.ಎ ಕಾಲೇಜು ಇಂಜಿನಿಯರಿಂಗ್ ವಿದ್ಯಾರ್ಥಿ ರನೀಮ್(18)ಹಾಗೂ ಒಡಿಶಾ ಜಾಸ್‍ಪುರ್ ನಿವಾಸಿ ಸುಶಾಂತ್ ಸಾಹು(41)ಮೃತಪಟ್ಟವರು.
ರನೀಮ್ ತನ್ನ ಸ್ನೇಹಿತರೊಂದಿಗೆ ಮಂಗಳೂರಿನಿಂದ ಚೆನ್ನೈ ಸಂಚರಿಸುತ್ತಿದ್ದ ಚೆನ್ನೈ ಮೈಲ್ ಎಕ್ಸ್‍ಪ್ರೆಸ್ ರೈಲಲ್ಲಿ ಸಂಚರಿಸುವ ಮಧ್ಯೆ ಕುಂಬಳೆಯಿಂದ ಅಲ್ಪ ಮುಂದಕ್ಕೆ ಸಾಗುತ್ತಿದ್ದಂತೆ ರನೀಮ್ ರೈಲಿಂದ ಬಿದ್ದಿದ್ದರು. ತಕ್ಷಣ ಜತೆಗಿದ್ದವರು ರೈಲ್ವೆ ಪೊಲೀಸರಿಗೆ ನೀಡಿದ ಮಾಹಿತಿಯನ್ವಯ ರೈಲ್ವೆ ಪೊಲಿಸ್, ಅಗ್ನಿಶಾಮಕದಳ, ಸ್ಥಳೀಯ ಪೊಲೀಸರು ಸ್ಥಳಕ್ಕಾಗಮಿಸಿ ದೀರ್ಘ ಕಾಲ ಹುಡುಕಾಟ ನಡೆಸಿದ ನಂತರ ಮೊಗ್ರಾಲ್‍ಪುತ್ತೂರು ಕಲ್ಲಂಗೈ ಪಂಜಿಗುಡ್ಡೆ ಬಳಿ ಕುರುಚಲು ಪೊದೆಯೆಡೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹ ಜನರಲ್ ಆಸ್ಪತ್ರೆಗೆ ಸಾಗಿಸಿದ ನಂತರ ಮನೆಯವರಿಗೆ ಹಸ್ತಾಂತರಿಸಲಾಯಿತು.
ಇನ್ನೊಂದು ಪ್ರಕರಣದಲ್ಲಿ ಇದೇ ರೈಲಿನಲ್ಲಿ ಪತ್ನಿ ಹಾಗೂ ಪುತ್ರಿಯೊಂದಿಗೆ ಪ್ರಯಾಣಿಸುತ್ತಿದ್ದ ಒಡಿಶಾ ಜಾಸ್‍ಪುರ್ ನಿವಾಸಿ ಸುಶಾಂತ್ ಸಾಹು ಅವರು ಕಾಸರಗೋಡು ನಿಲ್ದಾಣ ಕ್ಕೆ ತಲುಪಿದಾಗ ಕುಡಿಯುವ ನೀರು ಖರೀದಿಸಲು ರೈಲಿಂದ ಇಳಿದಿದ್ದಾರೆ. ನಿಲ್ದಾಣದಿಂದ ರೈಲು ಹೊರಡುತ್ತಿದ್ದಂತೆ ಇವರು ರೈಲನ್ನೇರುವ ಸಂದರ್ಭ ಆಯತಪ್ಪಿ ಪ್ಲ್ಯಾಟ್‍ಫಾರ್ಮ್ ಸಂದಿಗೆ ಬಿದ್ದಿದ್ದರು. ತಕ್ಷಣ ಪ್ರಯಾಣಿಕರು ಚೈನ್ ಎಳೆದು ರೈಲು ನಿಲುಗಡೆಗೊಳಿಸಿದ್ದರೂ, ಇವರ ದೇಹ ರೈಲಿನಡಿ ಸಿಲುಕಿ ಛಿದ್ರಗೊಂಡಿತ್ತು. ಸುಶಾಂತ್ ಮಂಗಳೂರಿನಲ್ಲಿ ಪೆಟ್ರೋಲ್ ಪಂಪ್ ಒಂದರಲ್ಲಿ ಕಾರ್ಮಿಕರಾಗಿದ್ದರು. ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.