ಉಜ್ಜಯಿನಿ: ಪ್ರಾಚೀನ ಭಾರತೀಯ ಪದ್ದತಿಗಳಂತೆ ಕಾಲಮಾನ ಹಾಗೂ ಪಂಚಾಂಗದ ವಿವರಗಳನ್ನು ಸಾರ್ವಜನಿಕರಿಗೆ ತೋರಿಸಲು ಮಧ್ಯಪ್ರದೇಶದ ಉಜ್ಜಯಿನಿಯ ನಗರದ ಮಧ್ಯಭಾಗದಲ್ಲಿ ಅಳವಡಿಸಿದ್ದ ಬೃಹತ್ ವೇದಿಕ್ ಗಡಿಯಾರದ ಕಾರ್ಯನಿರ್ವಹಣೆ ಮೇಲೆ ಶುಕ್ರವಾರ ಸೈಬರ್ ದಾಳಿ ನಡೆದಿದೆ.

ಗಡಿಯಾರದ ಕಾರ್ಯನಿರ್ವಹಣೆಯಲ್ಲಿ ತಪ್ಪು ಮಾಹಿತಿಗಳು ಬಿತ್ತರವಾಗುತ್ತಿರುವುದಲ್ಲದೇ ನಿಧಾನವಾಗಿದೆ. ಪರಿಶೀಲನೆ ನಡೆಸಿದಾಗ ಇದೊಂದು ಸೈಬರ್ ದಾಳಿ ಎಂದು ತಿಳಿದು ಬಂದಿದೆ ಎಂದು ಉಜ್ಜಯಿನಿಯ 'ಮಹಾರಾಜ ವಿಕ್ರಮಾದಿತ್ಯ ಶೋಧ ಪೀಠ'ದ ನಿರ್ದೇಶಕರಾದ ಶ್ರೀರಾಮ್ ತಿವಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಕ್ರಮಾದಿತ್ಯ ವೇದಿಕ್ ಗಡಿಯಾರವನ್ನು ಉಜ್ಜಯಿನಿಯ ಜಂತರ್ ಮಂತರ್‌ನಲ್ಲಿ 85 ಅಡಿ ಎತ್ತರದ ಗೋಪುರದ ಮೇಲೆ ಸ್ಥಾಪಿಸಲಾಗಿದೆ. ಫೆಬ್ರುವರಿ 29ರಂದು ಪ್ರಧಾನಿ ಮೋದಿ ಅವರು ಇದನ್ನು ಸಾರ್ವಜನಿಕರಿಗೆ ಅನಾವರಣಗೊಳಿಸಿದ್ದರು.
ಉಜ್ಜಯಿನಿಯ ಮಹಾಕಾಲೇಶ್ವರ ದೇವಸ್ಥಾನದ ಒತ್ತಾಸೆಯಿಂದ ಈ ಗಡಿಯಾರ ತಲೆ ಎತ್ತಿತ್ತು.
ಸೈಬರ್ ದಾಳಿ ಬಗ್ಗೆ ನ್ಯಾಷನಲ್ ಸೈಬರ್ ಕ್ರೈಂ ಪೋರ್ಟಲ್ ಮೂಲಕ ದೂರು ದಾಖಲಿಸಲಾಗಿದೆ ಎಂದು ತಿವಾರಿ ಅವರು ತಿಳಿಸಿದ್ದಾರೆ.
ವಿಕ್ರಮಾದಿತ್ಯ ವೇದಿಕ್ ಗಡಿಯಾರ ಪ್ರಾಚೀನ ಭಾರತೀಯ ಪದ್ದತಿಗಳಂತೆ ಕಾಲಮಾನ ಹಾಗೂ ಇತರ ವಿವರಗಳನ್ನು ತೋರಿಸುವ ಪ್ರಪಂಚದ ಮೊದಲ ಬೃಹತ್ ಸಾರ್ವಜನಿಕ ಗಡಿಯಾರ ಎಂದು ಹೇಳಲಾಗಿದೆ.