ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ಕುರಿತು ಜರ್ಮನಿಯ ವಿದೇಶಾಂಗ ಸಚಿವಾಲಯ ನೀಡಿದ್ದ ಹೇಳಿಕೆಗೆ ಭಾರತ ತೀವ್ರ ಪ್ರತಿಭಟನೆ ದಾಖಲಿಸಿದೆ.
ಜರ್ಮನಿಯ ರಾಯಭಾರ ಕಚೇರಿಯ ಉಪ ಮುಖ್ಯಸ್ಥ (ಡೆಪ್ಯುಟಿ ಚೀಫ್ ಆಫ್ ಮಿಷನ್) ಜಾರ್ಜ್ ಎಂಜ್‌ವೀಲರ್ ಅವರನ್ನು ಶನಿವಾರ ಕರೆಯಿಸಿಕೊಂಡ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ), ಕೇಜ್ರಿವಾಲ್ ಅವರ ಬಂಧನದ ವಿಚಾರವಾಗಿ ಜರ್ಮನಿಯ ವಿದೇಶಾಂಗ ಸಚಿವಾಲಯ ನೀಡಿರುವ ಹೇಳಿಕೆಯು 'ಭಾರತದ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪದಂತಿದೆ' ಹಾಗೂ 'ಪೂರ್ವಗ್ರಹಪೀಡಿತ ನಂಬಿಕೆಗಳನ್ನು ಹೊಂದಿರುವ ಅಗತ್ಯ ಇಲ್ಲವೇ ಇಲ್ಲ' ಎಂದು ಸ್ಪಷ್ಟವಾಗಿ ತಿಳಿಸಿದೆ.
ಕೇಜ್ರಿವಾಲ್ ಬಂಧನ ಕುರಿತು ಹೇಳಿಕೆ ನೀಡಿದ್ದ ಜರ್ಮನಿಯ ವಿದೇಶಾಂಗ ಸಚಿವಾಲಯದ ವಕ್ತಾರರು, 'ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಸಂಬಂಧಿಸಿದ ಮಾನದಂಡಗಳನ್ನು ಈ ಪ್ರಕರಣದಲ್ಲಿಯೂ ಅನ್ವಯಿಸಲಾಗುತ್ತದೆ ಎಂಬುದಾಗಿ ನಾವು ನಿರೀಕ್ಷಿಸುತ್ತೇವೆ' ಎಂದಿದ್ದರು.
'ನಮ್ಮ ದೇಶದ ಆಂತರಿಕ ವ್ಯವಹಾರಗಳ ಕುರಿತು ಜರ್ಮನಿಯ ವಿದೇಶಾಂಗ ಕಚೇರಿಯ ವಕ್ತಾರರು ನೀಡಿರುವ ಹೇಳಿಕೆ ಸರಿ ಅಲ್ಲ. ಈ ಸಂಬಂಧ ಜರ್ಮನಿಯ ರಾಯಭಾರಿಯನ್ನು ಕರೆಯಿಸಿ, ಭಾರತ ತೀವ್ರ ಪ್ರತಿಭಟನೆಯನ್ನು ದಾಖಲಿಸಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
'ಈ ರೀತಿಯ ಹೇಳಿಕೆಗಳನ್ನು ನೀಡುವುದನ್ನು ನಮ್ಮ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವ ಮತ್ತು ನಮ್ಮ ನ್ಯಾಯಾಂಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಪ್ರಯತ್ನದಂತೆ ಕಾಣುತ್ತೇವೆ' ಎಂದು ಜೈಸ್ವಾಲ್ ಅವರು ಹೇಳಿದ್ದಾರೆ.
'ಭಾರತದಲ್ಲಿ ಲಿಖಿತ ಕಾನೂನಿಗೆ ಅನುಗುಣವಾಗಿ ಆಡಳಿತ ನಡೆಸುವ ವ್ಯವಸ್ಥೆ ಹಾಗೂ ಬಲಿಷ್ಠವಾದ ಪ್ರಜಾಪ್ರಭುತ್ವ ಇದೆ. ದೇಶದ ಇತರ ಯಾವುದೇ ಪ್ರಕರಣಗಳಲ್ಲಿ ಆಗುವಂತೆ, ಪ್ರಜಾತಂತ್ರ ವ್ಯವಸ್ಥೆ ಇರುವ ಯಾವುದೇ ದೇಶದಲ್ಲಿ ಆಗುವಂತೆ ಕಾನೂನು ಇಲ್ಲಿ ತನ್ನ ಕಾರ್ಯವನ್ನು ಮಾಡುತ್ತದೆ. ಈ ವಿಷಯವಾಗಿ ಪೂರ್ವಗ್ರಹಪೀಡಿತವಾಗಿ ಹೊಂದಿರುವ ನಂಬಿಕೆಗಳು ತೀರಾ ಅನಗತ್ಯ' ಎಂದು ತಿಳಿಸಿದ್ದಾರೆ.