ನವದೆಹಲಿ : ರಾಜ್ಯಪಾಲರು ಸಂವಿಧಾನಕ್ಕನುಗುಣವಾಗಿ ನಡೆದುಕೊಳ್ಳಬೇಕು ಎಂದು ಶನಿವಾರ ಸುಪ್ರೀಂಕೋರ್ಟ್ ನ್ಯಾ. ಬಿ.ವಿ.ನಾಗರತ್ನ ಅಭಿಪ್ರಾಯ ಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಸರಕಾರಗಳು ರವಾನಿಸಿದ ಮಸೂದೆಗಳಿಗೆ ಅಂಕಿತ ಹಾಕದ ರಾಜ್ಯಪಾಲರು, ತಕರಾರು ಅರ್ಜಿಗಳಲ್ಲಿ ಭಾಗಿಯಾಗುತ್ತಿರುವುದನ್ನು ಗಣನೆಗೆ ತೆಗೆದುಕೊಂಡು ಅವರು ಈ ರೀತಿ ಹೇಳಿದ್ದಾರೆ.
"ಸಾಂವಿಧಾನಿಕ ನ್ಯಾಯಾಲಯಗಳೆದುರು ಪರಿಗಣನೆಗಾಗಿ ರಾಜ್ಯಪಾಲರು ಏನು ಮಾಡುತ್ತಿದ್ದಾರೆ ಎಂದು ತರುವುದು ಸಂವಿಧಾನದಡಿಯಲ್ಲಿ ಆರೋಗ್ಯಕರ ಪ್ರವೃತ್ತಿಯಲ್ಲ. ರಾಜ್ಯಪಾಲರ ಹುದ್ದೆಯನ್ನು ಅಲಂಕಾರಿಕ ಎಂದು ಕರೆಯಲಾಗಿದ್ದರೂ, ರಾಜ್ಯಪಾಲರು ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸಿದರೆ ಇಂತಹ ತಕರಾರುಗಳು ತಗ್ಗಬಹುದು. ರಾಜ್ಯಪಾಲರಿಗೆ ಇಂಥದ್ದನ್ನು ಮಾಡಿ ಅಥವಾ ಮಾಡಬೇಡಿ ಎಂದು ಹೇಳುವುದು ಮುಜುಗರದ ಸಂಗತಿ. ಅವರೆಲ್ಲಿದ್ದಾರೆ ಎಂಬುದನ್ನು ಹೇಳುವ ಸಮಯ ಇದೀಗ ಬಂದಿದ್ದು, ಅವರು ಸಂವಿಧಾನದ ಪ್ರಕಾರ ತಮ್ಮ ಕರ್ತವ್ಯ ನಿರ್ವಹಿಸಬೇಕು" ಎಂದು ಕಿವಿಮಾತು ಹೇಳಿದ್ದಾರೆ.
ಹೈದರಾಬಾದಿನ NALSAR ಕಾನೂನು ವಿಶ್ವವಿದ್ಯಾಲಯವು ಆಯೋಜಿಸಿದ್ದ ನ್ಯಾಯಾಲಯಗಳು ಮತ್ತು ಸಂವಿಧಾನ ವಿಚಾರಗೋಷ್ಠಿಯ ಪ್ರಾಸ್ತಾವಿಕ ಅವಧಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕೇರಳ, ತೆಲಂಗಾಣ ಹಾಗೂ ಪಂಜಾಬ್ ರಾಜ್ಯಪಾಲರ ನಡವಳಿಕೆಯ ಕುರಿತು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.