ಕಾಸರಗೋಡು: ಲೋಕಸಭಾ ಚುನಾವಣೆಗೆ ದಿನ ನಿಗದಿಯಾಗುವುದಕ್ಕೂ ಮೊದಲೇ ಕಾಸರಗೋಡು ಲೋಕಸಭಾ ಕ್ಷೇತ್ರದ ಪ್ರಮುಖ ಮೂರು ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪ್ರಚಾರ ಆರಂಭಿಸಿದೆ.
ಕಾಂಗ್ರೆಸ್ ನೇತೃತ್ವದ ಐಕ್ಯರಂಗದಿಂದ ಹಾಲಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಸಿಪಿಎಂ ನೇತೃತ್ವದ ಎಡರಂಗದಿಂದ ಕಾಸರಗೋಡು ಜಿಪಂ ಮಾಜಿ ಅಧ್ಯಕ್ಷ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ ಬಾಲಕೃಷ್ಣನ್ ಹಾಗೂ ಬಿಜೆಪಿ ನೇತೃತ್ವದ ಎನ್‍ಡಿಎಯಿಂದ ಮಹಿಳಾಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.
ಮಂಜೇಶ್ವರ, ಕಾಸರಗೋಡು, ಉದುಮ, ಕಾಞಂಗಾಡು, ತೃಕ್ಕರಿಪುರ ಹಾಗೂ ಕಣ್ಣೂರು ಜಿಲ್ಲೆಯ ಪಯ್ಯನ್ನೂರು, ಕಲ್ಯಾಶ್ಯೇರಿ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕಾಸರಗೋಡು ಲೋಕಸಭಾ ಕ್ಷೇತ್ರದ ಜನತೆ ಇದುವರೆಗೂ ಕಾಂಗ್ರೆಸ್ ಹಾಗೂ ಸಿಪಿಎಂ ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ.
1957ರಲ್ಲಿ ಆರಂಭಗೊಂಡ ಚುನಾವಣಾ ಪ್ರಕ್ರಿಯೆಯಲ್ಲಿ 1967ರ ವರೆಗೆ ನಿರಂತರವಾಗಿ ಸಿಪಿಎಂನ ಹಿರಿಯ ಮುಖಂಡ ಎ.ಕೆ ಗೋಪಾಲನ್(ಎ.ಕೆ.ಜಿ) ಆಯ್ಕೆಯಾಗುತ್ತಾ ಬಂದಿದ್ದರು. 1971ರಲ್ಲಿ ಮೊದಲ ಬಾರಿಗೆ ಇಲ್ಲಿ ಕಾಂಗ್ರೆಸ್ ಗೆಲುವು ಸಾದಿಸಿತ್ತು. ಇಂದಿನ ಎಡರಂಗ ಸರ್ಕಾರದಲ್ಲಿ ಸಚಿವರಾಗಿರುವ ಕಡನ್ನಪಳ್ಳಿ ರಾಮಚಂದ್ರನ್, ಅಂದು ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಸಿಪಿಎಂನ ಇ.ಕೆ ನಾಯನಾರ್ ಅವರನ್ನು ಪರಾಭವಗೊಳಿಸಿದ್ದರು.
1977ರಲ್ಲಿ ಮತ್ತೆ ಸಿಪಿಎಂನ ಎಂ. ರಾಮಣ್ಣ ರೈ ಅವರನ್ನು ಕಡನ್ನಪಳ್ಳಿ ರಾಮಚಂದ್ರನ್ ಪರಾಭವಗೊಳಿಸಿದ್ದರು. 1980ರಲ್ಲಿ ಕಾಸರಗೋಡು ಕ್ಷೇತ್ರವನ್ನು ಸಿಪಿಎಂ ಮತ್ತೆ ತನ್ನ ವಶಕ್ಕೆ ತೆಗೆದುಕೊಂಡರೂ, 1984ರ ಚುನಾವಣೆಯಲ್ಲಿ ಸಿಪಿಎಂನ ಇ.ಬಾಲಾನಂದನ್ ಅವರನ್ನು ಪರಾಭವಗೊಳಿಸುವ ಮೂಲಕ ಕಾಂಗ್ರೆಸ್‍ನ ಐ.ರಾಮರೈ ಲೋಕಸಭೆಗೆ ಆಯ್ಕೆಯಾಗಿದ್ದರು. 1989ರಲ್ಲಿ ಮತ್ತೆ ಸಿಪಿಎಂನ ಎಂ. ರಾಮಣ್ಣ ರೈ ಅವರು ಲೋಕಸಭೆಗೆ ಆಯ್ಕೆಯಾಗುವ ಮೂಲಕ 2019ರ ವರೆಗಿನ ಮೂರು ದಶಕಗಳ ಕಾಲ ಕ್ಷೇತ್ರದ ಜನತೆ ಸಿಪಿಎಂ ಅಭ್ಯರ್ಥಿಗಳನ್ನೇ ಆಯ್ಕೆಮಾಡಿ ಕಳುಹಿಸಿಕೊಟ್ಟಿದ್ದಾರೆ. 2019ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‍ನ ರಾಜ್‍ಮೋಹನ್ ಉಣ್ಣಿತ್ತಾನ್ ಅವರನ್ನು ಆಯ್ಕೆಮಾಡಿದೆ. ಕಲ್ಯೋಟ್ ನಿವಾಸಿಗಳಾದ ಕಾಂಗ್ರೆಸ್‍ನ ಕಾರ್ಯಕರ್ತರಿಬ್ಬರ ಬರ್ಬರ ಹತ್ಯಾಕಾಂಡ ಅಂದು ಕಾಂಗ್ರೆಸ್ ಕಡೆ ಒಲವು ವ್ಯಕ್ತವಾಗಲು ಕಾರಣವಾಗಿತ್ತು. ಪ್ರಸಕ್ತ ಹಾಲಿ ಸಂಸದಗೆ ಎರಡನೇ ಬಾರಿಗೆ ಕಾಂಗ್ರೆಸ್ ಅವಕಾಶ ಕಲ್ಪಿಸಿದೆ.