ಕ್ಷೌರಿಕ ವೃತ್ತಿಯ ಇಬ್ಬರು ವ್ಯಕ್ತಿಗಳು ಬದೌನ್ ಬಾಬಾ ಕಾಲೊನಿಯಲ್ಲಿ ಮಾರ್ಚ್ 19ರಂದು ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದರು.
ಈ ಮಕ್ಕಳ ತಂದೆ ವಿನೋದ್ ಕುಮಾರ್ ಅವರು ಬೈಕ್‌ಗೆ ಬೆಂಕಿ ಹಚ್ಚಿ, ತನಗೂ ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ತಡೆದಿದ್ದಾರೆ.
'ಮೊಮ್ಮಕ್ಕಳನ್ನು ಕಳೆದುಕೊಂಡು ಆರು ದಿನಗಳೇ ಆಗಿವೆ. ಆದರೆ ಕ್ರೌರ್ಯದ ಹಿಂದಿನ ಉದ್ದೇಶ ಏನು ಎಂಬುದನ್ನು ಪೊಲೀಸರು ಇನ್ನೂ ಕಂಡುಕೊಂಡಿಲ್ಲ' ಎಂದು ವಿನೋದ್ ಅವರ ತಾಯಿ ಮುನ್ನಿ ದೇವಿ ಪ್ರತಿಕ್ರಿಯಿಸಿದ್ದಾರೆ. 'ಪೊಲೀಸರು ಏನನ್ನಾದರೂ ಮುಚ್ಚಿಡುತ್ತಿದ್ದಾರೋ ಎಂಬುದೂ ಗೊತ್ತಿಲ್ಲ' ಎಂದು ಅವರು ಹೇಳಿದ್ದಾರೆ.
'ಹೋಳಿ ಹಬ್ಬದ ಸಂದರ್ಭದಲ್ಲಿ ವಿನೋದ್ ಕುಮಾರ್ ಅವರಿಗೆ ತನ್ನ ಮಕ್ಕಳ ನೆನಪು ಅತಿಯಾಗಿ ಕಾಡಿದೆ. ಮಕ್ಕಳ ಪಾದರಕ್ಷೆ, ಬಟ್ಟೆ ಮತ್ತಿತರ ಹಬ್ಬದ ಸಾಮಗ್ರಿಗಳನ್ನು ನೋಡಿ, ನೋವು ತಡೆಯಲಾರದೆ ಬೈಕಿಗೆ ಬೆಂಕಿ ಹಚ್ಚಿದ್ದಾರೆ' ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಪ್ರಿಯದರ್ಶಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಕ್ಷೌರಿಕ ವೃತ್ತಿಯ ಸಾಜಿದ್ ಮತ್ತು ಜಾವೇದ್ ಎಂಬುವವರನ್ನು ಆರೋಪಿಗಳು ಎಂದು ಗುರುತಿಸಲಾಗಿದ್ದು, ಘಟನೆ ನಡೆದ ದಿನವೇ ಸಾಜಿದ್ ಪೊಲೀಸ್ ಎನ್‌ಕೌಂಟರ್‌ನಲ್ಲಿ ಅಸುನೀಗಿದ್ದಾನೆ. ಮಾರ್ಚ್ 22ರಂದು ಜಾವೇದ್ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಅವರು ವಿವರಿಸಿದರು.
ಪೊಲೀಸರ ಪ್ರಕಾರ, ಸಾಜಿದ್ ತನಗೆ ಪರಿಚಯವಿರುವ ಕುಟುಂಬದವರ ಮನೆಗೆ ನುಗ್ಗಿ ಆಯುಷ್ (12), ಅಹಾನ್ (8) ಮತ್ತು ಯುವರಾಜ್ (10) ಎಂಬುವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಆಯುಷ್ ಮತ್ತು ಅಹಾನ್ ಸ್ಥಳದಲ್ಲಿಯೇ ಮೃತಪಟ್ಟರೆ, ಗಂಬೀರ ಗಾಯಗೊಂಡ ಯುವರಾಜ್ ಅನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಜಿದ್ ಎನ್‌ಕೌಂಟರ್ ಕುರಿತು ಜಿಲ್ಲಾಡಳಿತ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ.