ಮುಳ್ಳೇರಿಯ: 'ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಯನ್ನು ಪತ್ತೆ ಹಚ್ಚುವ ಉದ್ದೇಶದಲ್ಲಿ ಶಾಲೆಗಳಲ್ಲಿ ವಾರ್ಷಿಕೋತ್ಸವವು ನಡೆಸಲ್ಪಡುತ್ತದೆ. ವಿದ್ಯಾರ್ಥಿ ಜೀವನದ ಪರಿಪೂರ್ಣತೆಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಸಹಕಾರಿ'ಎಂದು ಅಡೂರಿನ ವಿದ್ಯಾಭಾರತಿ ವಿದ್ಯಾಲಯದ ಮುಖ್ಯ ಶಿಕ್ಷಕ ರವೀಂದ್ರ ಮಾಸ್ತರ್ ಹೇಳಿದರು.
ಅವರು ಶುಕ್ರವಾರ ಅಡೂರಿನ ವಿದ್ಯಾಭಾರತೀ ವಿದ್ಯಾಲಯದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವನಜ ಅವರು ದೀಪಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಮಾತನಾಡಿ, 'ಶಾಲೆಗಳು ಊರಿನ ಸೌಭಾಗ್ಯ. ಸದಾ ಜ್ಞಾನದಾನದ ಮೂಲಕ ಪರಿಸರದ ಎಳೆಯ ಮನಸುಗಳಲ್ಲಿ ಸದ್ವಿಚಾರಗಳನ್ನು ಅರಳಿಸುತ್ತದೆ. ಸಂಸ್ಕಾರಯುತ ಶಿಕ್ಷಣವು ಇಂದಿನ ಮಕ್ಕಳಿಗೆ ಅಗತ್ಯವಾಗಿ ನೀಡಬೇಕು' ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ವತಿಯಿಂದ ಮಕ್ಕಳಿಗಾಗಿ ನಡೆಸಿದ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಡೂರು ಕೊರತಿಮೂಲೆ ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥ ನೀಡುವ 2023-24ರ ಸಾಲಿನ ವಿದ್ಯಾರ್ಥಿವೇತನ ಪಡೆದ ಲಾವಣ್ಯ ಡಿ ಅವರನ್ನು ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ಇದೇ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಜನ್ಮದಿನ ಆಚರಿಸಲಿರುವ ಅನೇಕ ಮಕ್ಕಳಿಗೆ ದೀಪಬೆಳಗಿ, ಉಡುಗೊರೆಗಳನ್ನು ನೀಡಿ ಹರಸಲಾಯಿತು. ಶಾಲೆಯ ಮುಖ್ಯಸ್ಥೆ ಪ್ರೇಮಾ ಭಾರಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಸಮಿತಿ ಮುಖಂಡರಾದ ಡಿ. ವೆಂಕಟ್ರಾಜ್ ಅಡೂರು, ಗಣೇಶ, ಶಿಕ್ಷಕಿಯರಾದ ಶಾರದಾ ದೇವಿ ಬೈತನಡ್ಕ, ಪ್ರೇಮಾವತಿ ಟೀಚರ್, ಭಾರತೀ ಟೀಚರ್, ಸ್ಮಿತಾ ಟೀಚರ್ ಮೊದಲಾದವರು ಇದ್ದರು. ಸ್ವಾತಿ ಟೀಚರ್ ವಂದಿಸಿದರು. ಬೈತನಡ್ಕ ಬಾಲಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ನಂತರ ಶಾಲೆಯ ಮಕ್ಕಳಿಂದ ನೃತ್ಯ ಸಹಿತವಾದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದುವು. ವಾರ್ಷಿಕೋತ್ಸವದಲ್ಲಿ ಶಾಲಾ ವiಕ್ಕಳ ಪೋಷಕರು, ಅಭಿಮಾನಿಗಳು ಭಾಗವಹಿಸಿದ್ದರು.