ಕಾಸರಗೋಡು: ಸ್ವಂತ ಸೂರಿಲ್ಲದ, ಬಡ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಕಾಸರಗೋಡು ನಾಯರ್ ಅನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಕೆಎನ್‍ಇಡಬ್ಲ್ಯೂಎ)ವತಿಯಿಂದ ಎರಡು ಮನೆಗಳನ್ನು ನಿರ್ಮಿಸಲಾಗಿದ್ದು, ಇವುಗಳ ಗೃಹಪ್ರವೇಶ ಸಮಾರಂಭ ಮಾ. 30ರಂದು ಬೆಳಗ್ಗೆ ಎಂಟರಿಂದ ಒಂಬತ್ತರ ಮಧ್ಯೆ ನಡೆಯಲಿದ್ದು, ಕೀಲಿಕೈ ಹಸ್ತಾಂತರ ಕಾರಡ್ಕ ಕರ್ಮಂತೋಡಿಯ ಕಾವೇರಿ ಸಭಾಂಗಣದಲ್ಲಿ ನಡೆಯಲಿರುವುದಾಗಿ ಸಂಘಟನೆ ಪದಾಧಿಕಾರಿ ವಿ. ನಾರಾಯಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಂಘದ ವತಿಯಿಂದ ನಿರ್ಮಿಸಿ ನೀಡುವ ಎಂಟು ಮತ್ತು ಒಂಬತ್ತನೇ ಮನೆ ಇದಾಗಿದ್ದು, ಕಾರಡ್ಕ ಪಂಚಾಯಿತಿಯ ಕುಂಟಾರು ನಿವಾಸಿ ಮೋನಿಶಾ ಹಾಗೂ ಮುಳ್ಳೇರಿಯ ಪಾರ್ಥಕೊಚ್ಚಿಯ ಪ್ರೇಮಾವತಿ ಕುಟುಂಬಕ್ಕೆ ನೀಡಲಾಗುವುದು.
ಕಾಸರಗೋಡು ನಾಯರ್ ಅನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಕೆಎನ್‍ಇಡಬ್ಲ್ಯೂಎ) ಯುಎಇ ಯಲ್ಲಿ 2002 ರಲ್ಲಿ ಸ್ಥಾಪನೆಯಾದ ಕಾಸರಗೋಡು ಜಿಲ್ಲೆಯ ಅನಿವಾಸಿ ಭಾರತೀಯರ ಕುಟುಂಬ ಸಂಘವಾಗಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ವಸತಿ ಮುಂತಾದ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವುದು ಸಂಘದ ಪ್ರಮುಖ ಗುರಿಯಾಗಿದೆ. 'ವರ್ಷಕ್ಕೆ ಒಂದು ಮನೆ'ಯೋಜನೆಯು ದೂರದೃಷ್ಟಿಯಿಂದ ಆರಂಭಗೊಂಡಿದ್ದು, ಇಂದು ವರ್ಷಕ್ಕೆ ಎರಡರಿಂದ ಮೂರು ಮನೆಗಳನ್ನು ನಿರ್ಮಿಸಲು ಸಾಧ್ಯವಾಗಿದೆ.
ಈ ಬಾರಿ ಎಂಟನೇ ಮನೆಯನ್ನು ಸಂಘಟನೆ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಒಂಬತ್ತನೇ ಮನೆಯನ್ನು ಎಡವುಂಗಲ್‍ನ ವಲ್ಲಿಯೋಡನ್ ಗಂಗಾಧರನ್ ನಾಯರ್ ಅವರ ಸಹಕಾರದೊಂದಿಗೆ ನಿರ್ಮಿಸಲಾಗುತ್ತಿದ್ದು, ಮಾ. 30ರಂದು ಬೆಳಗ್ಗೆ 10.30ಕ್ಕೆ ಕೀಲಿಕೈ ಹಸ್ತಾಂತರ ಸಮಾರಂಭ ನಡೆಯುವುದು. ಸಂಸದ ರಾಜಮೋಹನ್, ಶಾಸಕ ಎನ್. ಎ. ನೆಲ್ಲಿಕುನ್ನು, ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ, ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಗೋಪಾಲಕೃಷ್ಣ ಭಾಗವಹಿಸಲಿದ್ದಾರೆ.
ಸಂಘಟನೆ ನೀಡುವ ಹತ್ತನೇ ಮನೆಯನ್ನು ಬೇಡಡ್ಕ ಗ್ರಾಮ ಪಂಚಾಯಿತಿಯ ಧನ್ಯ ಹಾಗೂ ಹನ್ನೊಂದನೇ ಮನೆಯನ್ನು ಚೆಮ್ನಾಡ್ ಪಂಚಾಯಿತಿಯ ಪರವನಡ್ಕದ ಎ. ಜಾನಕಿ ಅವರಿಗೆ ನಿಮಿಸಿಕೊಡಲಾಗುವುದು. ಈ ಬಾರಿ ಮೂರನೇ ಮನೆ ಕಟ್ಟಿಕೊಡಲು ಸಂಘದ ಕಾರ್ಯಕರ್ತರು ಸಿದ್ಧತೆ ನಡೆಸುತ್ತಿದ್ದು, ಇದರ ಶಿಲಾನ್ಯಾಸ ಕಾರ್ಯಕ್ರಮ ಏ. 4ರಂದು ಬೆಳಗ್ಗೆ 7ರಿಂದ 10.30ರ ಮಧ್ಯೆ ನಡೆಯಲಿದ್ದು, ಒಂದು ವರ್ಷದೊಳಗೆ ಮನೆ ನಿರ್ಮಾಣಕಾರ್ಯ ಪೂರ್ತಿಗೊಳಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪವಿತ್ರನ್ ನಿಟ್ಟೂರ್, ವೇಣುಗೋಪಾಲನ್ ಪಾಲಕ್ಕಲ್ ಮತ್ತು ಗೋಪಿನಾಥನ್ ಕೊಟ್ಟರುವಂ ಉಪಸ್ಥಿತರಿದ್ದರು.