ಕೊಚ್ಚಿಯಲ್ಲಿರುವ ಭಾರತೀಯ ನೌಕಾಪಡೆಯ ಹಡಗಿನಲ್ಲಿ ನಿಯೋಜನೆಗೊಂಡಿದ್ದ ಸಾಹಿಲ್ ವರ್ಮಾ ನಾಪತ್ತೆಯಾಗಿರುವ ನಾವಿಕ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾರ್ಚ್ 2ರಂದು ಎಕ್ಸ್ ವೇದಿಕೆಯಲ್ಲಿ ಮಾಹಿತಿ ಹಂಚಿಕೊಂಡಿದ್ದ ಪಶ್ಚಿಮ ನೌಕಾಪಡೆಯ ಕಮಾಂಡ್, 'ಸಾಹಿಲ್ ವರ್ಮಾ ನಾಪತ್ತೆಯಾಗುವ ಎರಡು ದಿನಗಳ ಮುಂಚೆ ಅಂದರೆ, ಫೆಬ್ರುವರಿ 25ರಂದು ತನ್ನ ಕುಟುಂಬಸ್ಥರ ಜೊತೆ ಫೋನ್‌ನಲ್ಲಿ ಮಾತನಾಡಿದ್ದ. ಆದರೆ, ಫೆಬ್ರುವರಿ 27ರಂದು ಸಾಹಿಲ್ ವರ್ಮಾ ನಾಪತ್ತೆಯಾಗಿದ್ದಾರೆ' ಎಂದು ಹೇಳಿದ್ದಾರೆ.
ಈ ಘಟನೆ ಬೆನ್ನಲ್ಲೇ, ನೌಕಾಪಡೆಯು ಹಡಗುಗಳು ಮತ್ತು ವಿಮಾನಗಳ ಮೂಲಕ ಸಾಹಿಲ್ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಅದು ಮುಂದುವರಿದಿದೆ.
ಹಡಗಿನಲ್ಲಿ ಅಳವಡಿಸಲಾಗಿರುವ ಯಾವುದೇ ಸಿಸಿಟಿ.ವಿ ಕ್ಯಾಮೆರಾಗಳಲ್ಲಿ ಸಾಹಿಲ್ ಹಡಗಿನಿಂದ ಸಮುದ್ರಕ್ಕೆ ಬಿದ್ದಿರುವುದು ದಾಖಲಾಗಿಲ್ಲ ಎಂದು ಸಾಹೀಲ್ ಅವರ ತಂದೆ ಸುಬಾಷ್ ಚಂದರ್ ಅವರು ಹಿರಿಯ ಅಧಿಕಾರಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾತನಾಡಿದ ಸುಬಾಷ್ ಅವರು, 'ಹಡಗಿನಲ್ಲಿ ಸಾಹಿಲ್ ಇದ್ದಾನೆಯೇ ಎಂಬುದರ ಖಚಿತತೆಗಾಗಿ ಸಿಬ್ಬಂದಿ ಹಡಗನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಆದರೆ, ಸಾಹಿಲ್ ಅವರು ಮಾತ್ರ ಇರಲಿಲ್ಲ. ಈ ವೇಳೆ ಹಡಗು ಸಮುದ್ರದ ಮಧ್ಯ ಭಾಗದಲ್ಲಿತ್ತು. ಆದಾಗ್ಯೂ, ಸಾಹಿಲ್ ಹಡಗಿನಲ್ಲೂ ಇಲ್ಲ. ಇತ್ತ ಸಮುದ್ರದಲ್ಲೂ ಬಿದ್ದಿಲ್ಲ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಹಾಗಿದ್ದರೆ, ಆತ ಎಲ್ಲಿಗೆ ಹೋದ' ಎಂದು ಪ್ರಶ್ನಿಸಿದ್ದಾರೆ.
'ಈ ಹಿನ್ನೆಲೆಯಲ್ಲಿ ಈ ವಿಚಾರದಲ್ಲಿ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮಧ್ಯಸ್ಥಿಕೆ ವಹಿಸಬೇಕು. ಆತನ ಸುರಕ್ಷತೆ ವಿಚಾರವು ನಮ್ಮನ್ನು ಪ್ರತಿಕ್ಷಣವೂ ಕಾಡುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದರು.