ಕಾಸರಗೋಡು: ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತ ಪ್ರದೇಶದಲ್ಲಿರುವ ಮತ್ತಷ್ಟು ಜನರನ್ನು ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಜೂನ್ ತಿಂಗಳಲ್ಲಿ ವೈದ್ಯಕೀಯ ಶಿಬಿರ ಆಯೋಜಿಸಲಾಗುವುದು. ಶಿಬಿರ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕಾಸರಗೋಡು ಜಿಲ್ಲಾಧಿಕಾರಿಗೆ ಜವಾಬ್ದಾರಿ ವಹಿಸಲಾಗಿದೆ.
ಎಂಡೋಸಲ್ಫಾನ್ ಸಂತ್ರಸ್ತರ ಸಮಸ್ಯೆಗಳನ್ನು ಚರ್ಚಿಸಲು ತಿರುವನಂತಪುರದಲ್ಲಿ ಮಾ. 13ರಂದು ಆಯೋಜಿಸಲಾಗಿದ್ದ ಸಚಿವರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸಕ್ತ ಜಿಲ್ಲಾಧಿಕಾರಿ ಕಚೇರಿಯಲ್ಲಿ 20,152 ಅರ್ಜಿಗಳು ಸಂತ್ರಸ್ತರ ಪಟ್ಟಿಗೆ ಸೇರ್ಪಡೆಗಾಗಿ ಬಂದಿವೆ. ತಜ್ಞರ ಸಮಿತಿಯ ಮಾರ್ಗಸೂಚಿಯಂತೆ ಆಯ್ಕೆಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖಾ ಸಮಿತಿಯನ್ನು ರಚಿಸಲೂ ತೀರ್ಮಾಣಿಸಲಾಗಿದೆ.
ಎಂಡೋಸಲ್ಫಾನ್ ಸಂತ್ರಸ್ತರು ಮತ್ತು ಅವರ ಕುಟುಂಬ ಸದಸ್ಯರು ಜೂನ್ 30, 2011 ರವರೆಗೆ ಪಡೆದಿರುವ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡಲು ವಿವರವಾದ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಾರೆ. 2011ಜೂನ್ 30ರ ನಂತರ ಪಡೆದಿರುವ ಸಾಲವನ್ನು ಪರಿಶೀಲಿಸಲು ಪ್ರತ್ಯೇಕ ಪ್ರಸ್ತಾವನೆ ಸಿದ್ಧಪಡಿಸುವಂತೆಯೂ ಸೂಚಿಸಲಾಗಿದೆ.
ಸಮಗ್ರ ಪುನರ್ವಸತಿಗಾಗಿ ಮುಳಿಯಾರ್ ಗ್ರಾಮದಲ್ಲಿ ಸ್ಥಾಪಿಸಿರುವ ಸಹಜೀವನಂ ಸ್ನೇಹಗ್ರಾಮ ಯೋಜನೆಗೆ ಅಗತ್ಯ ಸಿಬ್ಬಂದಿ ನೇಮಕಾತಿಗಾಗಿ ಜಿಲ್ಲಾ ಪಂಚಾಯಿತಿಯನ್ನು ಸಂಪರ್ಕಿಸಲಾಗಿದೆ. ಪಂಚಾಯಿತಿಗಳನ್ನೂ ಸೇರಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಸಚಿವರಾದ ಪಿಎ ಮುಹಮ್ಮದ್ ರಿಯಾಜ್, ವೀಣಾ ಜಾರ್ಜ್, ಡಾ.ಆರ್.ಬಿಂದು ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.