ನಾವು ಚಿಕ್ಕವರಾದಾಗಿನಿಂದ ಭೂಮಿಯ ಮೇಲೆ ಎಷ್ಟು ನೀರಿದೆ ಎಂಬ ಪ್ರಶ್ನೆಗೆ ಇಡೀ ಭೂ ಮಂಡಲದ ಮುಕ್ಕಾಲು ಭಾಗ ನೀರಿದೆ ಮತ್ತು ಕಾಲು ಭಾಗದಷ್ಟು ಮಾತ್ರ ಭೂಮಿಯಿದೆ ಎಂದು ಉತ್ತರಿಸುತ್ತಾ ಬಂದಿದ್ದೇವೆ. ಇದು ಸತ್ಯವೂ ಹೌದು. ಆದ್ರೆ ಭೂಮಿ ಮೇಲಿನ ಎಲ್ಲಾ ನೀರು ಕುಡಿಯಲು ಮತ್ತು ಬಳಕೆಗೆ ಯೋಗ್ಯವಲ್ಲ. ಏಕೆಂದರೆ ಸಮುದ್ರದ ನೀರು ಸಂಸ್ಕರಣೆಯಾಗದೆ ಬಳಸಲು ಸಾಧ್ಯವೇ ಇಲ್ಲ.
ಆದ್ರೆ ನಮಗೆ ಭೂಮಿಯ ಮೇಲಿರುವ ಕೇವಲ ಶೇ.0.3 ರಷ್ಟು ನೀರನ್ನು ಮಾತ್ರ ಬಳಕೆ ಮಾಡಬಹುದು. ಇದು ಶುದ್ಧ ನೀರು ಎನಿಸಿಕೊಂಡಿಕೊಂಡಿದೆ. ಉಳಿದ 99.7ರಷ್ಟು ನೀರು ಸಮುದ್ರ, ಮಣ್ಣು ಮತ್ತು ಗಾಲಿಯಲ್ಲಿ ಬೆರೆತಿದೆ ಎಂದು ವರದಿಗಳು ಹೇಳುತ್ತವೆ. ಈ 0.3ರಷ್ಟು ನೀರನ್ನು ನಾವು ಹಲವು ಮಾರ್ಗಗಳ ಮೂಲಕ ಪಡೆಯುತ್ತೇವೆ.ಆದರೆ ನೀವೆಂದಾದರು ಯೋಚಿಸಿದ್ದೀರಾ? ಭೂಮಿ ಒಳಗೆ ಎಷ್ಟು ಪ್ರಮಾಣದ ನೀರಿದೆ ಎಂದು. ಅಂತರ್ಜಲ ಎಂದು ಕರೆಯಲ್ಪಡುವ ನೀರು ಪರಿಶುದ್ಧವಾಗಿರುತ್ತದೆ. ಹಾಗಾದರೆ ಭೂಮಿ ಒಳಗೆ ಎಷ್ಟು ಪ್ರಮಾಣದ ನೀರಿದೆ. ಎಷ್ಟು ವರ್ಷಗಳ ಕಾಲ ಅದನ್ನು ಬಳಸಬಹುದು? ಎಂಬ ನಿಮ್ಮೆಲ್ಲಾ ಪ್ರಶ್ನೆಗಳಿಗೆ ನಾವಿಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಿದ್ದೇವೆ.
ಭೂಮಿಯ ಮೇಲೆ ಜೀವರಾಶಿ ಎಂಬುದು ಆರಂಭವಾಗಿದ್ದೇ ನೀರಿನೊಳಗೆ ಎಂಬುದು ಸಾಬೀತಾಗಿದೆ. ಹಾಗೆ ಭೂಮಿಯ ಮೇಲಿರುವ ನೀರಿಗಿಂತ ಹೆಚ್ಚು ನೀರು ಭೂಮಿ ಒಳಗಿದೆ. ಇದು ಬಳಕೆಗೂ ಯೋಗ್ಯವಾಗಿದೆ. ಭೂಮಿ ಮೇಲಿರುವ ಮಂಜುಗಡ್ಡೆ ಮತ್ತು ಹಿಮನದಿಗಳಲ್ಲಿರುವ ನೀರಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ನೀರು ಭೂಮಿ ಒಳಗೆ ಅಂತರ್ಜಲ ರೂಪದಲ್ಲಿದೆ ಎಂಬುದು 2011ರಲ್ಲಿ ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್ ಜರ್ನಲ್ ಅಧ್ಯಯನದಲ್ಲಿ ದಾಖಲಾಗಿದೆ.
ಭೂಮಿಯ ಹೊರಪದರದಲ್ಲಿ ಸರಿಸುಮಾರು 43.9 ಮಿಲಿಯನ್ ಚದರ ಕಿಲೋಮೀಟರ್ (10.5 ಮಿಲಿಯನ್ ಚದರ ಮೈಲುಗಳು) ನೀರಿದೆ ಎಂದು ಸಾಸ್ಕಾಚೆವಾನ್ ವಿಶ್ವವಿದ್ಯಾಲಯದ ಜಲವಿಜ್ಞಾನಿ ಮತ್ತು 2021ರ ಅಧ್ಯಯನದ ಪ್ರಮುಖ ಲೇಖಕ ಗ್ರಾಂಟ್ ಫರ್ಗುಸನ್ ತಮ್ಮ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ.
ಅಂಟಾರ್ಕ್ಟಿಕಾದಲ್ಲಿನ ಮಂಜುಗಡ್ಡೆಯು ಸುಮಾರು 6.5 ಮಿಲಿಯನ್ ಚದರ ಮೈಲುಗಳಷ್ಟು (27 ಮಿಲಿಯನ್ ಚದರ ಕಿಮೀ) ನೀರನ್ನು ಹೊಂದಿದೆ, ಗ್ರೀನ್‌ಲ್ಯಾಂಡ್‌ನಲ್ಲಿ ಸುಮಾರು 720,000 ಚದರ ಮೈಲುಗಳು (3 ಮಿಲಿಯನ್ ಚದರ ಕಿ.ಮೀ) ಮತ್ತು ಅಂಟಾರ್ಟಿಕಾ ಮತ್ತು ಗ್ರೀನ್‌ಲ್ಯಾಂಡ್‌ನ ಹೊರಗಿನ ಹಿಮನದಿಗಳಲ್ಲಿ 38,000 ಚದರ ಮೈಲುಗಳು (158,000 ಚದರ ಕಿ.ಮೀ)ನಷ್ಟು ನೀರಿದೆ ಎಂದು ತಿಳಿದುಬಂದಿದೆ.
ಎಷ್ಟು ವರ್ಷ ಅಂತರ್ಜಲ ಉಳಿಯಲಿದೆ?
ಬೆಳೆಯುತ್ತಿರುವ ನಗರಗಳು, ಜನಸಂಖ್ಯೆಯಿಂದ ನೀರಿನ ಮೂಲಗಳೇ ಇಂದು ಬತ್ತಿ ಹೋಗುತ್ತಿವೆ. ವ್ಯವಸಾಯ, ವಾಣಿಜ್ಯ ಕೆಲಸಗಳಿಗೆ ಬಿಟ್ಟು ಕುಡಿಯಲು ಸಹ ನೀರು ಸಿಗದ ಪರಿಸ್ಥಿತಿ ಇದೆ. ಮಳೆ ನೀರನ್ನೇ ಹೆಚ್ಚಾಗಿ ಅವಲಂಬಿಸಬೇಕಾದ ದುಸ್ಥಿತಿ ಎದುರಾಗಿದೆ. ಜಾಗತಿಕ ತಾಪಮಾನ ಇದೇ ರೀತಿಯಲ್ಲಿ ಮುಂದುವರೆದರೆ ಮುಂದಿನ 30 ವರ್ಷಗಳಲ್ಲಿ ನಮಗೆ ಅಂತರ್ಜಲದಿಂದ ನೀರು ಸಿಗುವುದಿಲ್ಲ ಎಂದು ವರ್ಲ್ಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ (ಡಬ್ಲ್ಯುಆರ್‌ಐ) ಅಧ್ಯಯನವೊಂದು ತಿಳಿಸಿದೆ. ಮುಂದಿನ 30 ವರ್ಷದಲ್ಲಿ ಅಂತರ್ಜಲ ಮಟ್ಟ ತೀರ ಕೆಳಮಟ್ಟಕ್ಕೆ ಕುಸಿಯಲಿದ್ದು, ನೀರು ಸಿಗುವುದೇ ಕಷ್ಟವಾಗಲಿದೆ. ಹೀಗಾಗಿ ಅಂತರ್ಜಲ ಮಟ್ಟ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದಿದೆ.
2050ರ ವೇಳೆಗೆ ವಿಶ್ವದ ಬಹುತೇಕ ಜನಸಂಖ್ಯೆ ಒಣ ಭೂಮಿಯಲ್ಲಿ ವಾಸಿಸುತ್ತಾರೆ ಎಂದಿದೆ. ಅಂದರೆ ಅಲ್ಲಿನ ಅಂತರ್ಜಲ ಹಾಗೂ ನೀರಿನ ಮೂಲ ಬಹುಪಾಲು ಬರಿದಾಗುತ್ತವೆ. ಆದರೆ ಈಗ ವಿಶ್ವದ ಜನಸಂಖ್ಯೆಯ 3.3 ಶತಕೋಟಿ ಜನರು ನೀರಿನ ಮೂಲವೇ ಇಲ್ಲದ ಪ್ರದೇಶದಲ್ಲಿ ವಾಸವಿದ್ದಾರೆ. ಅಲ್ಲಿ ಕುಡಿಯುವ ನೀರಿಗೂ ಹಾಹಾಕಾರವಿದೆ ಎಂದಿದೆ.