ನವದೆಹಲಿ: ವಿದೇಶಿ ಪ್ರವಾಸಿಗರು ಭಾರತದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಘಟನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅಮೆರಿಕದ ಪ್ರಜೆಯನ್ನು ಟೀಕಿಸಿದ, ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಅಧ್ಯಕ್ಷೆ ರೇಖಾ ಶರ್ಮಾ ಅವರು ವಿವಾದಕ್ಕೆ ಸಿಲುಕಿದ್ದಾರೆ.
ನವದೆಹಲಿ: ವಿದೇಶಿ ಪ್ರವಾಸಿಗರು ಭಾರತದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಘಟನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅಮೆರಿಕದ ಪ್ರಜೆಯನ್ನು ಟೀಕಿಸಿದ, ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಅಧ್ಯಕ್ಷೆ ರೇಖಾ ಶರ್ಮಾ ಅವರು ವಿವಾದಕ್ಕೆ ಸಿಲುಕಿದ್ದಾರೆ.
ಸ್ಪೇನ್ ಮಹಿಳೆಯ ಮೇಲೆ ಜಾರ್ಖಂಡ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಉಲ್ಲೇಖಿಸಿ ಅಮೆರಿಕದ ಪ್ರಜೆ ಡೇವಿಡ್ ಜೋಸೆಫ್ ವೊಲೊಝ್ಕೊ ಎಂಬವರು 'ಎಕ್ಸ್'ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದರು.
'ಭಾರತ ಪ್ರವಾಸದಲ್ಲಿದ್ದಾಗ ಒಮ್ಮೆ ಅಪರಿಚಿತಳಾಗಿರುವ ಬ್ರಿಟಿಷ್ ಮಹಿಳೆಯೊಬ್ಬಳು ನನ್ನ ಬಳಿ ಬಂದಳು. ರೈಲು ಪ್ರಯಾಣದ ವೇಳೆ ಜತೆಗಿರುವಂತೆಯೂ, ಆಕೆಯ ಗೆಳೆಯನಂತೆ ನಟಿಸುವಂತೆಯೂ ನನ್ನಲ್ಲಿ ಕೇಳಿಕೊಂಡಳು. ಏಕೆಂದರೆ, ವ್ಯಕ್ತಿಯೊಬ್ಬ ಆಕೆಯ ಪಾದವನ್ನು ನೆಕ್ಕಿ, ಕಿರುಕುಳ ನೀಡಿದ್ದ. ಆಕೆಗೆ ಅಸುರಕ್ಷತೆಯ ಭಾವ ಕಾಡಿತ್ತು' ಎಂದು ಡೇವಿಡ್ ಬರೆದುಕೊಂಡಿದ್ದರು.
ಭಾರತದ ಪುರುಷನೊಬ್ಬ ವಿದೇಶಿ ಮಹಿಳೆಯ ದೇಹ ಸ್ಪರ್ಶಿಸಿ ಕಿರುಕುಳ ನೀಡಿದ ಇನ್ನೊಂದು ಘಟನೆಯನ್ನು ವಿವರಿಸುತ್ತಾ, 'ಭಾರತದಲ್ಲಿ ಕೆಲವೇ ದಿನಗಳು ಇದ್ದರೂ ವಿದೇಶಿ ಮಹಿಳಾ ಪ್ರಯಾಣಿಕರು ಲೈಂಗಿಕ ಕಿರುಕುಳಕ್ಕೆ ಗುರಿಯಾಗುವರು. ನಾನು ಭಾರತವನ್ನು ಪ್ರೀತಿಸುತ್ತೇನೆ. ಭಾರತವು ಈಗ ಮಾತ್ರವಲ್ಲ, ಮುಂದೆಯೂ ನನ್ನ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ. ಆದರೆ ಅಲ್ಲಿಗೆ ಒಬ್ಬಂಟಿಯಾಗಿ ಪ್ರಯಾಣಿಸಬೇಡಿ ಎಂಬ ಸಲಹೆಯನ್ನು ನನ್ನ ಸ್ನೇಹಿತೆಯರಿಗೆ ನೀಡಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿರುವ ಶರ್ಮಾ, 'ನೀವು ಎಂದಾದರೂ ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೀರಾ? ಇಲ್ಲ ಎಂದಾದಲ್ಲಿ, ನೀವೊಬ್ಬ ಬೇಜವಾಬ್ದಾರಿಯ ವ್ಯಕ್ತಿ. ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಇಡೀ ದೇಶದ ಮಾನಹಾನಿ ಮಾಡುವುದು ಒಳ್ಳೆಯದಲ್ಲ' ಎಂದು ಹೇಳಿದ್ದಾರೆ.
ಸಂತ್ರಸ್ತರನ್ನು ದೂರಿದ್ದಕ್ಕೆ ಶರ್ಮಾ ಅವರನ್ನು ಹಲವರು ಟೀಕಿಸಿದ್ದಾರೆ. ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆಯೂ ಆಗ್ರಹಿಸಿದ್ದಾರೆ.