ನವದೆಹಲಿ: ಅರುಣಾಚಲ ಪ್ರದೇಶಕ್ಕೆ ಮೋದಿ ಭೇಟಿಯನ್ನು ಚೀನಾ ವಿರೋಧಿಸಿದೆ. ಈ ಮೂಲಕ ಗಡಿ ಪ್ರದೇಶದ ರಾಜ್ಯದ ಮೇಲೆ ತನ್ನ ಹಕ್ಕಿದೆ ಎಂಬುದನ್ನು ಪುನರುಚ್ಚರಿಸಿದ್ದು, ಭಾರತದ ನಡೆ ಗಡಿ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸುತ್ತದೆಯಷ್ಟೇ ಎಂಬ ಉದ್ಧಟತನದ ಹೇಳಿಕೆ ನೀಡಿದೆ.
ಶನಿವಾರದಂದು ಮೋದಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿ 13000 ಎತ್ತರದ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಸೆಲಾ ಸುರಂಗವನ್ನು ಲೋಕಾರ್ಪಣೆ ಮಾಡಿದ್ದರು. ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿರುವ ತವಾಂಗ್ ಗೆ ಎಲ್ಲಾ ಋತುವಿನಲ್ಲೂ ಈ ಸುರಂಗ ಸಂಪರ್ಕ ಕಲ್ಪಿಸಲಿದೆ ಹಾಗೂ ಗಡಿ ಪ್ರದೇಶದ ಉದ್ದಕ್ಕೂ ಸೇನಾ ಪಡೆಗಳ ಉತ್ತಮ ಚಲನೆಯನ್ನು ಸುಗಮಗೊಳಿಸಲಿದೆ.
ಅಸ್ಸಾಂನ ತೇಜ್‌ಪುರದಿಂದ ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ 825 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸುರಂಗವು ಇಷ್ಟು ಎತ್ತರದಲ್ಲಿ ವಿಶ್ವದ ಅತಿ ಉದ್ದದ ದ್ವಿಪಥ ರಸ್ತೆ ಸುರಂಗ ಮಾರ್ಗವಾಗಿದೆ.
ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಹೇಳುವ ಚೀನಾ ಭಾರತದ ಯಾವುದೇ ನಾಯಕ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವುದನ್ನು ವಿರೋಧಿಸುತ್ತದೆ. ಅರುಣಾಚಲ ಪ್ರದೇಶಕ್ಕೆ ಚೀನಾ ತನ್ನದೇ ಆದ ನಾಮಕರಣ ಮಾಡಿದ್ದು ಝಂಗ್ನಾನ್ ಎಂಬ ಹೆಸರನ್ನು ನೀಡಿದೆ.
ಭಾರತ ಅರುಣಾಚಲ ಪ್ರದೇಶದ ಮೇಲೆ ಚೀನಾದ ಹಕ್ಕುಗಳನ್ನು ನಿರಂತರವಾಗಿ ತಿರಸ್ಕರಿಸುತ್ತಾ ಬಂದಿದ್ದು, ರಾಜ್ಯ ದೇಶದ ಅವಿಭಾಜ್ಯ ಅಂಗವಾಗಿದೆ ಎಂದು ಪ್ರತಿಪಾದಿಸಿದೆ. ಈ ಪ್ರದೇಶಕ್ಕೆ ಚೀನಾ ನಾಮಕರಣ ಮಾಡಿರುವುದನ್ನು ನವದೆಹಲಿ ತಳ್ಳಿಹಾಕಿದ್ದು ಇದರಿಂದ ವಾಸ್ತವವನ್ನು ಬದಲಾಗುವುದಿಲ್ಲ ಎಂದು ಹೇಳಿದೆ.