ನವದೆಹಲಿ: ಕಡಲ ಗಡಿ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ನೂತನ ನೌಕಾನೆಲೆ 'ಐಎನ್‌ಎಸ್ ಜಟಾಯು' ಕಾರ್ಯಾಚರಣೆಗೆ ಮಿನಿಕಾಯ್ ದ್ವೀಪದಲ್ಲಿ ಭಾರತೀಯ ನೌಕಾಪಡೆ ಬುಧವಾರ ಚಾಲನೆ ನೀಡಿತು.
ಜೊತೆಗೆ, 'ಎಂಎಚ್-60ಆರ್' ಹೆಲಿಕಾಪ್ಟರ್‌ಗಳನ್ನು ಒಳಗೊಂಡ ನೌಕಾಪಡೆಯ ಮೊದಲ ತುಕಡಿಯನ್ನು ಕೊಚ್ಚಿಯಲ್ಲಿ ನಿಯೋಜಿಸಲಾಯಿತು.
ಇದೇ ಸಂದರ್ಭದಲ್ಲಿ, 'ಐಎನ್‌ಎಸ್ ಜಟಾಯು'ವಿನ ಮೊದಲ ಕಮಾಂಡಿಂಗ್ ಆಫೀಸರ್ ಆಗಿ ನೇಮಕವಾಗಿರುವ ಕಮಾಂಡರ್ ವ್ರತ ಬಘೇಲ್ ಅಧಿಕಾರ ವಹಿಸಿಕೊಂಡರು. ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ ಉಪಸ್ಥಿತರಿದ್ದರು.
ವಾಯುಪಡೆ ಸಿಬ್ಬಂದಿ ಸೇರಿದಂತೆ ಭಾರತದ ಎಲ್ಲ ಸಿಬ್ಬಂದಿ ತನ್ನ ನೆಲದಿಂದ ಹೊರ ಹೋಗಬೇಕು ಎಂದು ಮಾಲ್ದೀವ್ಸ್ ಘೋಷಿಸಿದ ಹಿನ್ನೆಲೆಯಲ್ಲಿ ಉಭಯ ದೇಶಗಳ ಸಂಬಂಧದಲ್ಲಿ ಕಂದಕ ಸೃಷ್ಟಿಯಾಗಿದೆ. ಹೀಗಾಗಿ, ಕಡಲ ಗಡಿ ರಕ್ಷಣೆ ವಿಚಾರದಲ್ಲಿ ಈ ನೌಕಾನೆಲೆಗಳ ಕಾರ್ಯಾರಂಭಕ್ಕೆ ಮಹತ್ವ ಬಂದಿದೆ.
ನೂತನ 'ಐಎನ್‌ಎಸ್ ಜಟಾಯು' ಹಾಗೂ ಈಗಾಗಲೇ ಅಂಡಮಾನ್‌ನಲ್ಲಿರುವ ನೌಕಾನೆಲೆ ದೇಶದ ರಕ್ಷಣೆ ವಿಷಯದಲ್ಲಿ 'ಕಣ್ಣು ಮತ್ತು ಕಿವಿ'ಗಳಂತೆ ಕಾರ್ಯ ನಿರ್ವಹಿಸಲಿವೆ ಎಂದು ನೌಕಾಪಡೆ ಹೇಳಿದೆ.
ಐಎನ್‌ಎಸ್ ಜಟಾಯು ನೌಕಾನೆಲೆಯಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲು ನೌಕಾಪಡೆ ಮುಂದಾಗಿದ್ದು, ಇದರ ಭಾಗವಾಗಿ ಏರ್‌ಸ್ಟ್ರಿಪ್ ನಿರ್ಮಾಣಕ್ಕೆ ಅನುಮೋದನೆ ನೀಡುವ ಪ್ರಕ್ರಿಯೆ ಅಂತಿಮ ಘಟ್ಟದಲ್ಲಿದೆ. ಇದರ ಜೊತೆಗೆ, ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವ ನಿಟ್ಟಿನಲ್ಲಿಯೂ ಪ್ರಯತ್ನಗಳು ನಡೆಯುತ್ತಿವೆ.
ಕವರತ್ತಿಯಲ್ಲಿ ದಿನದ 24 ಗಂಟೆಗಳ ಕಾಲ ಹೆಲಿಕಾಪ್ಟರ್‌ಗಳಿಂದ ಕಣ್ಗಾವಲು ವ್ಯವಸ್ಥೆಗೆ ಶೀಘ್ರವೇ ಚಾಲನೆ ನೀಡಲಾಗುತ್ತಿದ್ದು, ರಾಡಾರ್ ವ್ಯವಸ್ಥೆ ಅಳವಡಿಕೆಗಾಗಿ ವಾಯುಪಡೆಗೆ ಜಮೀನು ಹಂಚಿಕೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.