ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಉನ್ನತ ಪ್ರೌಢಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷ ಸೇವಾ ನಿವೃತ್ತಿ ಪಡೆಯಲಿರುವ ಮುಖ್ಯ ಶಿಕ್ಷಕ ಶಿವಶಂಕರ ಬಿ, ಅಧ್ಯಾಪಕರಾದ ರಾಜಾರಾಮ ರಾವ್. ಟಿ (ಕನ್ನಡ ), ವೆಂಕಟೇಶ ಪ್ರಸಾದ. ಪಿ(ಗಣಿತ) ಹಾಗೂ ಶಾಲಾ ಕಛೇರಿ ಸಿಬ್ಬಂದಿ ಉದಯಕುಮಾರ ಯು. ಅವರಿಗೆ ಶಾಲೆ ಹಾಗೂ ಆಡಳಿತ ಮಂಡಳಿ ವತಿಯಿಂದ ಸೋಮವಾರ ವಿದಾಯ ಕೂಟವನ್ನು ಏರ್ಪಡಿಸಲಾಯಿತು.
ಶಾಲಾ ಪ್ರಬಂಧಕಿ ಪ್ರೇಮ ಕೆ. ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಡಾ ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಹಳೆ ವಿದ್ಯಾರ್ಥಿ ಶೇಣಿ ಶಾರದಾಂಬ ಪ್ರೌಢ ಶಾಲೆಯ ಕನ್ನಡ ಅಧ್ಯಾಪಕ ಅಬ್ದುಲ್ ರಶೀದ್, ಪಿ.ಟಿ.ಎ. ಅಧ್ಯಕ್ಷೆ ವಿಜಿ ಮೋಳ್, ಮಾತೃ ಮಂಡಳಿ ಸದಸ್ಯೆ ಲಲಿತ, ಶಾಲಾ ರಕ್ಷಣಾ ಸಮಿತಿ ಸದಸ್ಯ ಚಂದ್ರಶೇಖರ್ ಎಂ.ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷ ಸೇವಾ ನಿವೃತ್ತಿ ಹೊಂದಲಿರುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಂದಿಕೇಶನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷರಾಗಿ ಆಯ್ಕೆಗೊಂಡ ಡಾ ಜಯಪ್ರಕಾಶ್ ನಾರಾಯಣ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಕೇರಳ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಿಸಿದ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಿಕ್ಷಕಿಯರಾದ ಮೃದುಲ ಕೆ.ಎಂ.ಸ್ವಾಗತಿಸಿ, ದಿವ್ಯಾ ಕೆ.ಟಿ. ವಂದಿಸಿದರು. ಶಿಕ್ಷಕ ಕಿರಣ ಕೆ.ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.