ತಿರುವನಂತಪುರಂ: ಭೂಮಿಯನ್ನು ಖರೀದಿಸುವುದು ಮತ್ತು ನಿವೇಶನವನ್ನು ಮರುಮಾರಾಟ ಮಾಡುವುದು ಇನ್ನು ಹಿಂದಿನಷ್ಟು ಸುಲಭವಲ್ಲ. ಇದಕ್ಕೆ ಸಂಬಂಧಿಸಿದ ಕಾರ್ಯವಿಧಾನಗಳು ಸಂಕೀರ್ಣವಾಗಿವೆ.
ಈ ನಿಟ್ಟಿನಲ್ಲಿ ಸರ್ಕಾರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದೇಶದ ಪ್ರಕಾರ, ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳು ಪ್ಲಾಟ್ ಮೂಲಕ ಭೂಮಿ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳಿರುವ ಸೂಚನೆಯನ್ನು ಸಾರ್ವಜನಿಕರಿಗೆ ಪ್ರದರ್ಶಿಸಬೇಕು. ಹೊಸ ನಿಯಮವು ಪ್ಲಾಟ್ ಅಭಿವೃದ್ಧಿಯನ್ನು ಕೇರಳ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ (ಕೆ.ರೇರಾ) ನೋಂದಾಯಿಸಿಕೊಳ್ಳಬೇಕು ಎಂದು ಹೇಳುತ್ತದೆ. ಈ ಕುರಿತ ಸುತ್ತೋಲೆಯನ್ನು ಪಂಚಾಯಿತಿ, ನಗರಸಭೆ ಮತ್ತು ಮಹಾನಗರ ಪಾಲಿಕೆಯ ಆಡಳಿತ ಮಂಡಳಿಯಲ್ಲಿ ಪ್ರತ್ಯೇಕವಾಗಿ ಮಂಡಿಸಬೇಕು.
ಅಕ್ರಮ ಅಥವಾ ಪರವಾನಗಿ ರಹಿತ ಭೂ ಮಾರಾಟವನ್ನು ತಡೆಯುವುದು ಹೊಸ ನಿಯಮದ ಉದ್ದೇಶವಾಗಿದೆ. ಈ ರೀತಿ ಮಾರಾಟ ನಡೆಯುತ್ತಿದ್ದರೆ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳು ಕಡಿವಾಣ ಹಾಕಬೇಕು. ಈ ಬಗ್ಗೆ ಮಾಹಿತಿ ಕೆ.ರೇರಾದಲ್ಲಿದೆ. ಇದನ್ನು ಆರ್‍ಇಆರ್‍ಎ ಕಾರ್ಯದರ್ಶಿಗೆ ಪ್ರತ್ಯೇಕವಾಗಿ ಕಳುಹಿಸಬೇಕು ಎಂದೂ ಸರ್ಕಾರಿ ಆದೇಶದಲ್ಲಿ ಸೂಚಿಸಲಾಗಿದೆ.