ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳಲ್ಲಿ ಕೈಗೊಳ್ಳುವುದಾಗಿ ₹ 5.9 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು 15 ದಿನಗಳಿಂದೀಚೆಗೆ ಘೋಷಿಸಿದ್ದಾರೆ. ಇವುಗಳಿಗೆ ಕೇಂದ್ರ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆಯೇ? ಎಂದು ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥ ಪಿ.ಚಿದಂಬರಂ ಕೇಳಿದ್ದಾರೆ.
ಪಕ್ಷದ ಪ್ರಧಾನ ಕಚೇರಿ ಸತ್ಯಮೂರ್ತಿ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಚಿದಂಬರಂ, 'ಫೆಬ್ರುವರಿ 22ರಿಂದ ಮಾರ್ಚ್ 7ರ ವರೆಗೆ ಪ್ರಧಾನಿ ಅವರು ತಮಿಳುನಾಡಿಗೆ ₹ 17,300 ಕೋಟಿ ಸೇರಿದಂತೆ ದೇಶದಾದ್ಯಂತ ₹ 5.9 ಲಕ್ಷ ಕೋಟಿ ಮೊತ್ತದ ವಿವಿಧ ಯೋಜನೆಗಳನ್ನು ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ನನಗೆ ತಿಳಿದಿರುವಂತೆ ಈ ಯೋಜನೆಗಳನ್ನು ಕೇಂದ್ರ ಬಜೆಟ್‌ನಲ್ಲಿ ಸೇರಿಸಿಲ್ಲ. ಈ ಘೋಷಣೆಗಳು ಕಾಗದದ ಮಲ್ಲಿಗೆ ಹೂವಿನಂತೆ' ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆ ಚುನಾವಣೆಗೂ ಮುನ್ನ ಘೋಷಿಸಿರುವ ಐದು ಗ್ಯಾರಂಟಿಗಳನ್ನು ಚುನಾವಣಾ ಪ್ರಣಾಳಿಕೆಗೆ ಸೇರಿಸಲಾಗುವುದು ಎಂದೂ ಇದೇ ವೇಳೆ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನೊಳಗೊಂಡ 'ಇಂಡಿಯಾ' ಮೈತ್ರಿಕೂಟ ಅಧಿಕಾರಕ್ಕೇರಿದರೆ ಕೇಂದ್ರ ಸರ್ಕಾರದಲ್ಲಿ 30 ಲಕ್ಷ ಉದ್ಯೋಗ ಭರ್ತಿ, ಡಿಪ್ಲೊಮಾ ಮತ್ತು ಪದವೀಧರರಿಗೆ ತಾವು ಉತ್ತೀರ್ಣರಾದ ಮೊದಲ ವರ್ಷದಲ್ಲಿ ಸರ್ಕಾರಿ ಅಥವಾ ಖಾಸಗಿ ವಲಯಗಳಲ್ಲಿ ಕನಿಷ್ಠ ಒಂದು ವರ್ಷ ಅಪ್ರೆಂಟಿಸ್‌ಷಿಪ್‌ಗೆ ಅವಕಾಶ, ಪ್ರಶ್ನೆ ಪತ್ರಿಕೆ ತಡೆಗೆ ಕಠಿಣ ಕ್ರಮ, ಗಿಗ್ ಕಾರ್ಮಿಕರಿಗೆ ಭದ್ರತೆ ಹಾಗೂ ಹೊಸದಾಗಿ ಉದ್ಯಮ ಆರಂಭಿಸಲು ಬಯಸುವ ಯುವಕರಿಗೆ ಹಣಕಾಸು ನೆರವು ನೀಡುವುದಾಗಿ ರಾಹುಲ್ ಘೋಷಿಸಿದ್ದರು.
ಕೇಂದ್ರದ ಮಾಜಿ ಸಚಿವರೂ ಆಗಿರುವ ಚಿದಂಬರಂ, 'ಲೋಕಸಭೆ ಚುನಾವಣೆ ಬಳಿಕ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದರೆ ಈ ಗ್ಯಾರಂಟಿಗಳನ್ನು ಈಡೇರಿಸಲಾಗುವುದು' ಎಂದಿದ್ದಾರೆ.
ಪ್ರಧಾನಿ ಮೋದಿ ಅವರು ಅಂತರರಾಷ್ಟ್ರೀಯ ಮಹಿಳಾ ದಿನದಂದು ಅಡುಗೆ ಅನಿಲ ಸಿಲಿಂಡರ್ ದರವನ್ನು ₹ 100 ಇಳಿಕೆ ಮಾಡುವುದಾಗಿ ಘೋಷಿಸಿದ್ದರು. ಈ ಸಂಬಂಧ ಮಾತನಾಡಿರುವ ಕಾಂಗ್ರೆಸ್ ನಾಯಕ, 'ಬೆಲೆ ಇಳಿಕೆ ಕ್ರಮವನ್ನು ಸ್ವಾಗತಿಸುತ್ತೇನೆ. ಆದರೆ, ಮೋದಿ ಅವರು ತಮ್ಮ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೇರಿದರೆ, ಬೆಲೆ ಏರಿಸುವುದಿಲ್ಲ ಎಂದು ಭರವಸೆ ನೀಡಬೇಕು' ಎಂದು ಒತ್ತಾಯಿಸಿದ್ದಾರೆ.
ಇಂಧನ ದರ ಇಳಿಸುವುದಾಗಿ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮತ್ತು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹ 15 ಲಕ್ಷ ಹಾಕುವುದಾಗಿ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯನ್ನು ಪ್ರಧಾನಿ ಈಡೇರಿಸಿಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ.
'ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದರೆ, ಸೇನಾ ನೇಮಕಾತಿಗಾಗಿ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಯನ್ನು ರದ್ದುಗೊಳಿಸಲಾಗುವುದು. ಹಿಂದೆ ಇದ್ದ ವ್ಯವಸ್ಥೆಯನ್ನೇ ಪುನಃಸ್ಥಾಪಿಸಲಾಗುವುದು' ಎಂದೂ ಹೇಳಿದ್ದಾರೆ.