ನವದೆಹಲಿ: ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಅಧಿಸೂಚನೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತೆ ಜಾರಿಗೊಳಿಸಲಾಗಿದೆ.

ಶಾಹೀನ್ ಭಾಗ್, ಜಾಮಿಯಾ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಮತ್ತು ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಎಎ ಜಾರಿ ವಿಷಯವಾಗಿ 2020ರಲ್ಲಿ ದೆಹಲಿ ಸಮುದಾಯಗಳ ಘರ್ಷಣೆಗೆ ಸಾಕ್ಷಿಯಾಗಿತ್ತು. ಹೀಗಾಗಿ ದೆಹಲಿಯ ಪ್ರತಿಯೊಬ್ಬ ವ್ಯಕ್ತಿಯ ಜೀವವೂ ನಮಗೆ ಮುಖ್ಯ ಎಂದು ಈಶಾನ್ಯ ದೆಹಲಿಯ ಡಿಸಿಪಿ ಜಾಯ್ ಟಿರ್ಕಿ ಪಿಟಿಐಗೆ ತಿಳಿಸಿದ್ದಾರೆ.
ಬಿಗಿ ಪೊಲೀಸ್ ಬಂದೋಬಸ್ತ್
ಅಸ್ಸಾಂ: ಸಿಎಎ ಅಧಿಸೂಚನೆ ಹೊರಬೀಳುತ್ತಿದ್ದಂತೆ ಅಸ್ಸಾಂ ರಾಜ್ಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಹಿತಕರ, ಶಾಂತಿ ಕದಡುವ ಘಟನೆಗಳು ನಡೆಯದಂತೆ ನಿಗಾವಹಿಸಲು ಗುವಾಹಟಿ ಸೇರಿ ಪ್ರಮುಖ ಪ್ರದೇಶಗಳಲ್ಲಿ ಪೊಲೀಸರು ಕಣ್ಗಾವಲು ಇರಿಸಿದ್ದಾರೆ.
ಅಧಿಸೂಚನೆ ಪ್ರಕಟ
ನೆರೆ ರಾಷ್ಟ್ರಗಳ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡುವ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸಲು ಕೇಂದ್ರ ಸರ್ಕಾರ ಇಂದು (ಸೋಮವಾರ) ಸಂಜೆ ಅಧಿಸೂಚನೆ ಹೊರಡಿಸಿದೆ.
ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರದಿಂದ ಈ ಅಧಿಸೂಚನೆ ಹೊರಬಿದ್ದಿದೆ.
ಸಿಎಎ ನಿಯಮಗಳ ಅಧಿಸೂಚನೆ ಹೊರಡಿಸಿದ ಬಳಿಕ ಕೇಂದ್ರದ ಮೋದಿ ಸರ್ಕಾರವು 2014ರ ಡಿ.31ರ ವರೆಗೆ ಭಾರತಕ್ಕೆ ವಲಸೆ ಬಂದ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನದ ಹಿಂದೂ, ಸಿಖ್, ಜೈನ, ಬುದ್ಧ, ಪಾರ್ಸಿ ಹಾಗೂ ಕ್ರೈಸ್ತರಿಗೆ ದೇಶದ ಪೌರತ್ವ ನೀಡಲಿದೆ.