ಮುಂಬೈ: ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಹೆಸರನ್ನು ಬದಲಿಸಿ ಮಹಾರಾಷ್ಟ್ರ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ.
ಇನ್ಮುಂದೆ ಅಹಮದ್ ನಗರ ಅಹಲ್ಯಾನಗರ ಎಂದು ಹೆಸರು ಬದಲಾವಣೆ ಆಗಿದೆ ಎಂದು ಸಿಎಂ ಏಕನಾಥ್ ಶಿಂದೆ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಹೊರ ಬಿದ್ದಿದೆ.
ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಉಪಮುಖ್ಯಮಂತ್ರಿಗಳಾದ ದೇವೇಂದ್ರ ಪಢಣವೀಸ್ ಮತ್ತು ಅಜಿತ್ ಪವಾರ್ ಹಾಗೂ ಕ್ಯಾಬಿನೆಟ್ ಸಚಿವರು ಈ ಸಭೆಯಲ್ಲಿ ಭಾಗವಹಿಸಿದ್ದರು.
'ಸಂತರ ನಾಡು' ಎಂದೇ ಗುರುತಿಸಿಕೊಂಡಿರುವ ಅಹಮದ್‌ನಗರಕ್ಕೆ ಅಹಿಲ್ಯಾಬಾಯಿ ಹೋಳ್ಕರ್ ಹೆಸರಿಡಬೇಕೆಂಬ ಬೇಡಿಕೆ ಸಾಕಷ್ಟು ಹಳೆಯದು. ಕೆಲವು ತಿಂಗಳ ಹಿಂದೆ ವಿಧಾನ ಪರಿಷತ್ ಸದಸ್ಯ, ಬಿಜೆಪಿಯ ಗೋಪಿಚಂದ್ ಪೆಡಾಳ್ಕರ್ ಸರ್ಕಾರಕ್ಕೆ ಔಪಚಾರಿಕವಾಗಿ ಮನವಿ ಮಾಡಿದ್ದರು.
ಔರಂಗಾಬಾದ್‌ನ ಹೆಸರನ್ನು ಛತ್ರಪತಿ ಸಂಭಾಜಿ ನಗರ ಎಂದು ಮತ್ತು ಓಸ್ಮಾನಾಬಾದ್‌ನ ಹೆಸರನ್ನು ಧಾರಾಶಿವ ಎಂದು ಬದಲಾಯಿಸಲು ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡು, ಕೇಂದ್ರ ಸರ್ಕಾರ ಅನುಮೋದನೆ ನೀಡಿದ ನಂತರ ಹೆಸರು ಬದಲಾವಣೆಯ ಪರ್ವ ಮುಂದುವರಿದಿದೆ.
ಹೆಸರು ಬದಲಾಗಲಿರುವ ನಿಲ್ದಾಣಗಳು:
ಸೆಂಟ್ರಲ್ ರೈಲ್ವೆ ಮತ್ತು ಪಶ್ಚಿಮ ರೈಲ್ವೆಯ ಮುಂಬೈನ ಉಪನಗರ ನಿಲ್ದಾಣಗಳ ಹಳೆಯ/ ಪ್ರಸ್ತಾವಿತ ಹೊಸ ಹೆಸರುಗಳೆಂದರೆ - ಕರಿ ರಸ್ತೆ (ಲಾಲ್‌ಬಾಗ್), ಸ್ಯಾಂಡ್‌ಹರ್ಸ್ಟ್ ರಸ್ತೆ (ಡೋಂಗ್ರಿ), ಮೆರೈನ್ ಲೈನ್ಸ್ (ಮುಂಬಾದೇವಿ) ಚಾರ್ನಿ ರಸ್ತೆ (ಗಿರ್‌ಗಾಂವ್), ಕಾಟನ್ ಗ್ರೀನ್ (ಕಲಚೌಕಿ), ಡಾಕ್‌ಯಾರ್ಡ್ ರಸ್ತೆ (ಮಜಗಾಂವ್), ಕಿಂಗ್ಸ್ ಸರ್ಕಲ್ (ತೀರ್ಥಂಕರ ಪಾರ್ಶ್ವನಾಥ).
ಹೆಸರು ಬದಲಾವಣೆಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಅನುಮೋದಿಸಿದ ನಂತರ ರೈಲ್ವೆ ಸಚಿವಾಲಯ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗುತ್ತಿದೆ.
ವೀರ ವನಿತೆ ಅಹಿಲ್ಯಾಬಾಯಿ:
ಅಹಿಲ್ಯಾಬಾಯಿ ಹೋಳ್ಕರ್ (31 ಮೇ, 1725 - 13 ಆಗಸ್ಟ್, 1795), ಒಬ್ಬ ಮಹಾನ್ ಸುಧಾರಕಿ ಮತ್ತು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ದೇಶದಾದ್ಯಂತ ನೂರಾರು ದೇವಾಲಯಗಳು ಮತ್ತು ಧರ್ಮಶಾಲೆಗಳನ್ನು ನಿರ್ಮಿಸುವಲ್ಲಿಯೂ ಅವರು ನೆರವಾಗಿದ್ದರು.
ಅಹಿಲ್ಯಾಬಾಯಿ ಹೋಳ್ಕರ್ ಅವರು ಅಹಮದ್‌ನಗರ ಜಿಲ್ಲೆಯ ಚೌಂಡಿಯಲ್ಲಿ ಧಂಗರ್ ಕುಟುಂಬದಲ್ಲಿ ಜನಿಸಿದವರು. ಹೋಳ್ಕರ್‌ನ ಹೋಳ್ಕರ್ ರಾಜವಂಶದ ಖಂಡೇರಾವ್ ಹೋಳ್ಕರ್ ಅವರನ್ನು ವಿವಾಹವಾಗಿದ್ದರು. ಪತಿ ಖಂಡೇರಾವ್ ಹೋಳ್ಕರ್ ಮತ್ತು ಮಾವ ಮಲ್ಹಾರ್ ರಾವ್ ಹೋಳ್ಕರ್ ಅವರ ನಿಧನದ ನಂತರ, ಅಹಿಲ್ಯಾಬಾಯಿ ಹೋಳ್ಕರ್ ಅವರು ಹೋಳ್ಕರ್ ರಾಜವಂಶದ ಆಡಳಿತ ನಡೆಸಿದರು. ಮಾಳ್ವ ರಾಜ್ಯದ ಮೇಲೆ ದಂಡೆತ್ತಿ ಬಂದ ದಾಳಿಕೋರರನ್ನು ವಿರುದ್ಧ ಹೋರಾಟ ನಡೆಸಿ, ರಾಜ್ಯ ರಕ್ಷಿಸಿದ, ಇದಕ್ಕಾಗಿ ಖುದ್ದು ಸೈನ್ಯವನ್ನು ಯುದ್ಧಕ್ಕೆ ಕೊಂಡೊಯ್ದ ವೀರ ವನಿತೆ ಎನ್ನುವ ಶ್ರೇಯ ಅಹಿಲ್ಯಾ ಅವರದು.