ಭೋಪಾಲ್: ಲೋಕಸಭೆ ಚುನಾವಣೆಗೆ ಮುನ್ನ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ನಿಕಟವರ್ತಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ನ ಇತರ ಕೆಲವು ನಾಯಕರು ಸೋಮವಾರ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ಸಹ ಇಂದು ಭಾರತೀಯ ಜನತಾ ಪಕ್ಷಕ್ಕೆ(ಬಿಜೆಪಿ) ಸೇರ್ಪಡೆಗೊಂಡರು. ಮಾಜಿ ಕಾಂಗ್ರೆಸ್ ವಕ್ತಾರರಾಗಿದ್ದ ಸೈಯದ್ ಜಾಫರ್ ಅವರು ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಪಕ್ಷದ ರಾಜ್ಯಾಧ್ಯಕ್ಷ ವಿಡಿ ಶರ್ಮಾ ಅವರ ಸಮ್ಮುಖದಲ್ಲಿ ಇಂದು ಭೋಪಾಲ್‌ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಕಾಂಗ್ರೆಸ್ ಹಿರಿಯ ನಾಯಕ ಛಿಂದ್ವಾರಾ ಮೂಲದ ಜಾಫರ್ ಅವರು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಆಪ್ತರಪ ಎಂದು ಪರಿಗಣಿಸಲಾಗಿತ್ತು. X ನಲ್ಲಿನ ಅವರ ಪ್ರೊಫೈಲ್ ಪ್ರಕಾರ, ಜಾಫರ್ ಅವರು ಪ್ರಸ್ತುತ ಮಧ್ಯ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಹೊಂದಿದ್ದರು. ಆದರೆ, ಜಾಫರ್ ಸದ್ಯ ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ಹೊಂದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಕೆ ಕೆ ಮಿಶ್ರಾ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಕಮಲ್ ನಾಥ್ ಅವರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ಇದ್ದವು. ಆದರೆ ಅವರು ಇದು "ಮಾಧ್ಯಮಗಳ ಸೃಷ್ಟಿ" ಎಂದು ಹೇಳಿ, ವರದಿಗಳನ್ನು ನಿರಾಕರಿಸಿದ್ದರು.