ನವದೆಹಲಿ: ಯಾವುದೇ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ ಸಂದರ್ಭದಲ್ಲಿ, ಬಂಧನಕ್ಕೆ ಕಾರಣವಾದ ಅಂಶಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಗೆ ಲಿಖಿತವಾಗಿ ತಿಳಿಸಬೇಕು. ಈ ವಿಷಯದಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನವದೆಹಲಿ: ಯಾವುದೇ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ ಸಂದರ್ಭದಲ್ಲಿ, ಬಂಧನಕ್ಕೆ ಕಾರಣವಾದ ಅಂಶಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಗೆ ಲಿಖಿತವಾಗಿ ತಿಳಿಸಬೇಕು. ಈ ವಿಷಯದಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ, ಜಾರಿ ನಿರ್ದೇಶನಾಲಯ (ಇ.ಡಿ), ಗುರುಗ್ರಾಮ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆ 'ಎಂ3ಎಂ' ಸಮೂಹದ ನಿರ್ದೇಶಕರಾದ ಬಸಂತ್ ಬನ್ಸಲ್ ಹಾಗೂ ಪಂಕಜ್ ಬನ್ಸಲ್ ಅವರನ್ನು ಬಂಧಿಸಿತ್ತು.
ಈ ಇಬ್ಬರನ್ನು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದ್ದ ಸುಪ್ರೀಂ ಕೋರ್ಟ್, ಇವರ ಬಂಧನಕ್ಕೆ ಸಂಬಂಧಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ಆದೇಶವನ್ನು ರದ್ದುಗೊಳಿಸಿ ಕಳೆದ ಅಕ್ಟೋಬರ್ 3ರಂದು ಆದೇಶಿಸಿತ್ತು.
ಅಕ್ಟೋಬರ್ 3ರ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಮಾತನ್ನು ಹೇಳಿರುವ ಸುಪ್ರೀಂ ಕೋರ್ಟ್, ತನ್ನ ತೀರ್ಪಿನಲ್ಲಿ ಯಾವುದೇ ದೋಷ ಇಲ್ಲ. ಹೀಗಾಗಿ, ಮರುಪರಿಶೀಲನೆ ಅಗತ್ಯ ಇಲ್ಲ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಸಂಜಯಕುಮಾರ್ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿದ್ದು, ಮಾರ್ಚ್ 20ರಂದು ಆದೇಶ ಪ್ರಕಟಿಸಿದೆ.
ಅಲ್ಲದೇ, ತೆರೆದ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಸುವಂತೆ ಕೋರಿ ಕೇಂದ್ರ ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ಸಹ ನ್ಯಾಯಪೀಠ ವಜಾಗೊಳಿಸಿದೆ.
ಅರ್ಜಿ ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯ ಕಾರ್ಯವೈಖರಿ ಕುರಿತು ಕಟು ಟೀಕೆ ಮಾಡಿದ ನ್ಯಾಯಪೀಠ, 'ಜಾರಿ ನಿರ್ದೇಶನಾಲಯ ಪ್ರತೀಕಾರ ತೀರಿಸಿಕೊಳ್ಳುವ ರೀತಿಯಲ್ಲಿ ವರ್ತಿಸಬಾರದು. ಅತ್ಯಂತ ನ್ಯಾಯಸಮ್ಮತ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕು' ಎಂದು ಹೇಳಿದೆ.