ನವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಯುಎಸ್ಬಿ ಚಾರ್ಜರ್ ಬಳಕೆ ಹಗರಣದ ಸ್ವರೂಪ ತಾಳಿದ್ದು ಇದರ ಬಗ್ಗೆ ಎಚ್ಚರದಿಂದ ಇರುವಂತೆ ನಾಗರಿಕರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ವಿಮಾನ ನಿಲ್ದಾಣಗಳು, ಕೆಫೆಗಳು, ಹೋಟೆಲ್ಗಳು ಮತ್ತು ಬಸ್ ನಿಲ್ದಾಣಗಳಂಥ ಸಾರ್ವಜನಿಕ ಸ್ಥಳದಲ್ಲಿ ಯುಎಸ್ಬಿ ಚಾರ್ಜರ್ ಬಳಕೆ ಅಪಾಯಕಾರಿ ಎಂದು ಸರ್ಕಾರ ಹೇಳಿದೆ.
ಸಾರ್ವಜನಿಕ ಸ್ಥಳಗಳಲ್ಲಿರುವ ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಗಳನ್ನು ಸೈಬರ್ ಕ್ರಿಮಿನಲ್ಗಳು ದುರುದ್ದೇಶಗಳಿಗೆ ಬಳಸಿಕೊಳ್ಳುವ ಸಾಧ್ಯತೆಯಿದೆ ಎಂಬುದು ಕಳವಳಕ್ಕೆ ಕಾರಣವಾಗಿದೆ.
ಜ್ಯೂಸ್-ಜಾಕಿಂಗ್: ಸಾರ್ವಜನಿಕ ಸ್ಥಳಗಳಲ್ಲಿರುವ ವೈರಸ್ಪೂರಿತ ಯುಎಸ್ಬಿ ಸ್ಟೇಶನ್ಗಳ ಚಾರ್ಜಿಂಗ್ ಸಾಧನಗಳು ಬಳಕೆದಾರರನ್ನು ಜ್ಯೂಸ್-ಜಾಕಿಂಗ್ ಸೈಬರ್ ದಾಳಿಗಳಿಗೆ ಒಳಗಾಗುವಂತೆ ಮಾಡುವ ಸಾಧ್ಯತೆಯಿದೆ.
ಬಳಕೆದಾರರ ದತ್ತಾಂಶಗಳನ್ನು (ಡಾಟಾ) ಕದಿಯಲು ಅಥವಾ ಯುಎಸ್ಬಿ ಪೋರ್ಟಲ್ಗಳಿಗೆ ಕನೆಕ್ಟ್ ಆದ ಸಾಧನಗಳಲ್ಲಿ ಮಾಲ್ವೇರ್ ಸಂಸ್ಥಾಪಿಸಲು ಸೈಬರ್ ಕ್ರಿಮಿನಲ್ಗಳು ಬಳಸುವ ಸೈಬರ್ ದಾಳಿ ಕಾರ್ಯತಂತ್ರವನ್ನು ಜ್ಯೂಸ್ ಜಾಕಿಂಗ್ ಎನ್ನುತ್ತಾರೆ. ಯಾವುದೇ ಅನುಮಾನವಿಲ್ಲದ ಬಳಕೆದಾರರು ಈ ಸ್ಥಳಗಳ ಚಾರ್ಜಿಂಗ್ ಪೋರ್ಟಲ್ಗಳಲ್ಲಿ ತಮ್ಮ ಸಾಧನಗಳನ್ನು ಪ್ಲಗ್ ಮಾಡಿದಾಗ, ಸೈಬರ್ ಕ್ರಿಮಿನಲ್ಗಳು ಡಾಟಾ ಕದಿಯಲು ಅಥವಾ ಮಾಲ್ವೇರ್ಗಳನ್ನು ಸ್ಥಾಪಿಸಲು ಸಾಧ್ಯವಾಗಬಹುದು. ಇದರಿಂದಾಗಿ ವೈಯಕ್ತಿಕ ಮಾಹಿತಿ ಕಳವಾಗಬಹುದು. ಅಲ್ಲದೆ, ಹಣಕಾಸಿನ ಬೇಡಿಕೆಯೊಂದಿಗೆ ಸಾಧನವನ್ನು ಎನ್ಕ್ರಿಪ್ಟ್ ಮಾಡುವ ಅಪಾಯವೂ ಇರುತ್ತದೆ.
ಸುರಕ್ಷತೆ ಮಾಗೋಪಾಯ: ಇಂಥ ಅಪಾಯಗಳಿಂದ ತಪ್ಪಿಸಿಕೊಳ್ಳಲು ಇಲೆಕ್ಟ್ರಿಕಲ್ ವಾಲ್ ಔಟ್ಲೆಟ್ಗಳನ್ನು ಬಳಸುವುದು ಅಥವಾ ವೈಯಕ್ತಿಕ ಕೇಬಲ್ ಅಥವಾ ಪವರ್ ಬ್ಯಾಂಕ್ಗಳನ್ನು ಒಯ್ಯುವುದು ಸುರಕ್ಷಿತ ದಾರಿಯಾಗಿದೆ. ಬಳಕೆದಾರರು ತಮ್ಮ ಸಾಧನಗಳನ್ನು ಲಾಕ್ ಮಾಡುವುದು ಮತ್ತು ಅಪರಿಚಿತ ಸಾಧನಗಳೊಂದಿಗೆ ಪೇರ್ ಮಾಡಿಕೊಳ್ಳುವುದನ್ನು ತಪ್ಪಿಸಬೇಕು. ಫೋನ್ ಟರ್ನ್ ಆಫ್ ಆಗಿದ್ದಾಗ ಫೋನ್ ಚಾರ್ಜ್ ಮಾಡುವುದು ಕೂಡ ಸುರಕ್ಷಿತ ಮಾರ್ಗವಾಗಿದೆ.