ಥಾಣೆ: ಖಿನ್ನತೆಯಿಂದ ಬಳಲುತ್ತಿದ್ದ ವೈದ್ಯೆಯೊಬ್ಬರು ಭಾರತದ ಅತಿ ಉದ್ದದ ಸಮುದ್ರ ಸೇತುವೆ ಅಟಲ್ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಿಳೆ ಮಾರ್ಚ್ 18ರ ಮಧ್ಯಾಹ್ನ ಟ್ಯಾಕ್ಸಿಯಲ್ಲಿ ಪ್ರಯಾಣ ಬೆಳೆಸಿದ್ದರು. ಅಟಲ್ ಸೇತುವೆ ಬಳಿ ಟ್ಯಾಕ್ಸಿ ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದ ವೈದ್ಯೆ (38) ಏಕಾಏಕಿ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಪ್ರಕರಣ ಸಂಬಂಧ ಮೃತ ಮಹಿಳೆಯ ಮನೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ಡೆತ್ ನೋಟ್ ಪತ್ತೆಯಾಗಿದೆ. ' ನಾನು 8 ವರ್ಷಗಳಿಂದ ಖಿನ್ನತೆಗೆ ಒಳಗಾಗಿದ್ದು, ಅಟಲ್ ಸೇತುವೆಯಿಂದ ಜಿಗಿದು ನನ್ನ ಜೀವನವನ್ನು ಅಂತ್ಯಗೊಳಿಸಲು ಬಯಸುತ್ತೇನೆ. ಟ್ಯಾಕ್ಸಿ ಚಾಲಕ ಸೇರಿದಂತೆ ನನ್ನ ಸಾವಿಗೆ ಯಾರು ಕಾರಣರಲ್ಲ' ಎಂದು ಸಂತ್ರಸ್ತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ನಡುವೆ ಅದೇ ದಿನ ಥಾಣೆ ಜಿಲ್ಲೆಯ ಭೋಯಿವಾಡ ಪೊಲೀಸ್ ಠಾಣೆಯಲ್ಲಿ ಮಹಿಳೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಕಾಣೆ ಪ್ರಕರಣ ದಾಖಲಿಸಿರುವುದು ಬೆಳಕಿಗೆ ಬಂದಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ₹17,840 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ 'ಅಟಲ್ ಸೇತು' ಅನ್ನು ಈಚೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.
ಅಟಲ್ ಸೇತು ಸುಮಾರು 21.8 ಕಿಮೀ ಉದ್ದದ ಆರು-ಪಥದ ಸೇತುವೆಯಾಗಿದ್ದು, 16.5 ಕಿಮೀ ಸಮುದ್ರದ ಮೇಲೆ ಹಾಗೂ 5.5 ಕಿಮೀ ಭೂಮಿಯ ಮೇಲೆ ನಿರ್ಮಿಸಲಾಗಿದೆ.