ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವು ಚೀನಾದ ಸಹಯೋಗದಲ್ಲಿ ಮಂಡಿಸಿದ 'ಇಸ್ಲಾಮೊಫೋಬಿಯಾ' ಕುರಿತ ಕರಡು ನಿರ್ಣಯದ ಮೇಲಿನ ಮತದಾನದಿಂದ ಭಾರತ ದೂರವುಳಿಯಿತು.
'ಕೇವಲ ಒಂದು ಧರ್ಮವನ್ನು ಪ್ರತ್ಯೇಕಿಸುವ ಬದಲು, ಹಿಂಸೆ ಮತ್ತು ತಾರತಮ್ಯ ಎದುರಿಸುತ್ತಿರುವ ಹಿಂದೂ, ಬೌದ್ಧ, ಸಿಖ್ ಮತ್ತು ಇತರ ಧರ್ಮಗಳ ವಿರುದ್ಧದ 'ಧರ್ಮ ದ್ವೇಷ'ವನ್ನೂ ಖಂಡಿಸಬೇಕು' ಎಂದು ಭಾರತ ಪ್ರತಿಪಾದಿಸಿದೆ.
193 ಸದಸ್ಯರ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಶುಕ್ರವಾರ ಮಂಡಿಸಿದ 'ಇಸ್ಲಾಮೊಫೋಬಿಯಾವನ್ನು ಎದುರಿಸಲು ಕ್ರಮಗಳು' ಕುರಿತ ನಿರ್ಣಯವನ್ನು ಅಂಗೀಕರಿಸಲಾಯಿತು. 115 ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. ಯಾವುದೇ ರಾಷ್ಟ್ರ ಈ ನಿರ್ಣಯದ ವಿರುದ್ಧ ಮತ ಚಲಾಯಿಸಲಿಲ್ಲ. ಭಾರತ, ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಇಟಲಿ, ಉಕ್ರೇನ್ ಮತ್ತು ಬ್ರಿಟನ್ ಸೇರಿ 44 ರಾಷ್ಟ್ರಗಳು ಮತದಾನದಿಂದ ದೂರವುಳಿದವು.
ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಂಬೋಜ್ ಅವರು, 'ನಾವು ಹಿಂದೂ, ಬೌದ್ಧ ಮತ್ತು ಸಿಖ್ ವಿರೋಧಿ ಭಾವನೆಗಳ ವಿರುದ್ಧ ನಿಂತಿದ್ದೇವೆ. ಅದು ಕ್ರಿಶ್ಚಿಯನ್‌ಫೋಬಿಯಾ ಅಥವಾ ಇಸ್ಲಾಮೊಫೋಬಿಯಾ ಆಗಿರಬಹುದು. ಎಲ್ಲಾ ರೀತಿಯ ಧಾರ್ಮಿಕ ಫೋಬಿಯಾ ವಿರುದ್ಧವಾದ ನಿಲುವು ನಮ್ಮದು' ಎಂದು ಹೇಳಿದ್ದಾರೆ.
ಪಾಕ್‌ಗೆ ತರಾಟೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಯೋಧ್ಯೆ ರಾಮಮಂದಿರ, ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಬಗ್ಗೆ ವಿಷಯ ಪ್ರಸ್ತಾಪಿಸಿರುವ ಪಾಕಿಸ್ತಾನವನ್ನು ಭಾರತ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಪಾಕಿಸ್ತಾನ ಪದೇ ಪದೇ ಅದೇ ರಾಗ ತೆಗೆಯುತ್ತಿದೆ ಎಂದು ಟೀಕಿಸಿದೆ.