ಕೊಲ್ಲಂ: ಇಲ್ಲಿಗೆ ಸಮೀಪದ ಪ್ರಸಿದ್ಧ ಕೊಟ್ಟನ್‌ಕುಲಂಗರ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ವೇಳೆ ರಥದ ಚಕ್ರದಡಿ ಸಿಲುಕಿ ಐದು ವರ್ಷದ ಮಗುವೊಂದು ನಿನ್ನೆ ರಾತ್ರಿ ಸಾವಿಗೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಕ್ತರು ರಥವನ್ನು ಎಳೆಯುತ್ತಿದ್ದ ವೇಳೆ ರಥದ ದೊಡ್ಡ ಚಕ್ರಗಳ ಅಡಿಯಲ್ಲಿ ಆಕಸ್ಮಿಕವಾಗಿ ಬಿದ್ದು ಚವರ ನಿವಾಸಿಗಳಾದ ದಂಪತಿ ಪುತ್ರಿ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ರಾತ್ರಿ 11.30ರ ಸುಮಾರಿಗೆ ಅವಘಡ ಸಂಭವಿಸಿದೆ. ಆಕೆ ತನ್ನ ಪೋಷಕರೊಂದಿಗೆ ದೇವಸ್ಥಾನಕ್ಕೆ ಬಂದಿದ್ದಳು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಕೆಲವೊಮ್ಮೆ ಮಕ್ಕಳು ಕೂಡ ರಥಕ್ಕೆ ಕಟ್ಟಿದ ಹಗ್ಗವನ್ನು ಎಳೆಯುತ್ತಾರೆ. ಈ ವೇಳೆ ಆಕೆ ಆಕಸ್ಮಿಕವಾಗಿ ಬಿದ್ದಿದ್ದಾಳೆಂದು ತೋರುತ್ತದೆ' ಎಂದು ಪೊಲೀಸರು ಹೇಳಿದರು.
ಘಟನೆ ನಡೆದ ಕೂಡಲೇ ಮಗುವನ್ನು ಪೋಷಕರು ಮತ್ತು ಪೊಲೀಸರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆ ವೇಳೆಗಾಗಲೇ ಸಾವಿಗೀಡಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.