HEALTH TIPS

ಲಂಚ ಪಡೆದ ಎಂಪಿ, ಎಂಎಲ್‌ಎಗಳಿಗಿಲ್ಲ ರಕ್ಷಣೆ: ಮಹತ್ವದ ತೀರ್ಪು ನೀಡಿದ 'ಸುಪ್ರೀಂ'

               ವದೆಹಲಿ: ಸದನದಲ್ಲಿ ಮತ ಚಲಾಯಿಸಲು ಅಥವಾ ಮಾತನಾಡಲು ಲಂಚ ಪಡೆಯುವ ಶಾಸಕರು ಮತ್ತು ಸಂಸದರಿಗೆ ಕಾನೂನು ಕ್ರಮದಿಂದ ರಕ್ಷಣೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಸೋಮವಾರ ತೀರ್ಪು ನೀಡಿದೆ.

             ಇಂತಹ ಕೃತ್ಯ ಎಸಗಿದ ಶಾಸಕರು, ಸಂಸದರಿಗೆ ಕಾನೂನು ಕ್ರಮದಿಂದ ರಕ್ಷಣೆ ಇದೆ ಎಂದು ಜೆಎಂಎಂ ಲಂಚ ಪ್ರಕರಣದಲ್ಲಿ 1998ರಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ನೀಡಿದ್ದ ಬಹುಮತದ ತೀರ್ಪನ್ನು ಕೋರ್ಟ್‌ ಈ ಮೂಲಕ ರದ್ದುಪಡಿಸಿದೆ.

              ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಏಳು ಮಂದಿ ನ್ಯಾಯಮೂರ್ತಿಗಳ ಪೀಠವು ಸರ್ವಾನುಮತದಿಂದ ನೀಡಿರುವ ಈ ತೀರ್ಪು ಮೈಲಿಗಲ್ಲು ಎಂದು ಬಿಂಬಿತವಾಗಿದೆ.

                ಶಾಸನ ಸಭೆಗಳ ಸದಸ್ಯರು ಎಸಗುವ ಭ್ರಷ್ಟಾಚಾರ, ಅವರಲ್ಲಿನ ಲಂಚಗುಳಿತನವು ದೇಶದ ಸಂಸದೀಯ ಪ್ರಜಾತಂತ್ರದ ನೆಲೆಗಟ್ಟನ್ನೇ ಹಾಳುಮಾಡುತ್ತದೆ ಎಂದ ಹೇಳಿರುವ ನ್ಯಾಯಪೀಠವು, 'ಸಂಸದೀಯ ಹಕ್ಕುಗಳು ಲಂಚ ಪಡೆಯುವುದಕ್ಕೆ ರಕ್ಷಣೆ ಒದಗಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದೆ.

ಶಾಸನಸಭೆಗಳ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದರೆ, ಲಂಚ ಪಡೆದರೆ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಹಾಳಾಗುತ್ತದೆ ಎಂದು ಹೇಳಿರುವ ಕೋರ್ಟ್‌, 1998ರಲ್ಲಿ ನೀಡಿದ ತೀರ್ಪಿನಲ್ಲಿನ ವ್ಯಾಖ್ಯಾನವು ಸಂವಿಧಾನದ 105 ಹಾಗೂ 194ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ. ಸಂವಿಧಾನದ ಈ ಎರಡು ವಿಧಿಗಳು ಸಂಸದರು ಹಾಗೂ ಶಾಸಕರಿಗೆ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಇರುವ ಹಕ್ಕುಗಳು, ಅಧಿಕಾರದ ಬಗ್ಗೆ ವಿವರಣೆ ನೀಡುತ್ತವೆ.

               ಜೆಎಂಎಂ ಲಂಚ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಬಹುಮತದ ತೀರ್ಪಿನಲ್ಲಿ, 'ಸದನದಲ್ಲಿ ಮಾಡಿದ ಯಾವುದೇ ಭಾಷಣ ಅಥವಾ ಚಲಾಯಿಸಿದ ಮತಕ್ಕೆ ಸಂಬಂಧಿಸಿದಂತೆ ಸದಸ್ಯರಿಗೆ ಕಾನೂನಿನ ಕ್ರಮದಿಂದ ರಕ್ಷಣೆ ಇದೆ. ಸಂವಿಧಾನದ 105(2) ಹಾಗೂ 194(2) ವಿಧಿಗಳು ಈ ರಕ್ಷಣೆ ಒದಗಿಸಿವೆ' ಎಂದು ಹೇಳಿತ್ತು.

              'ಭ್ರಷ್ಟಾಚಾರ ಮತ್ತು ಲಂಚಗುಳಿತನವು ಸಂವಿಧಾನದ ಹೆಬ್ಬಯಕೆಗಳನ್ನು, ಅದು ಬಯಸುವ ಚರ್ಚೆಯ ಮಾದರಿಗಳನ್ನು ನಾಶಪಡಿಸುವಂಥದ್ದು. ಜವಾಬ್ದಾರಿಯುತವಾದ, ಸ್ಪಂದನಶೀಲವಾದ ಮತ್ತು ಪ್ರಾತಿನಿಧ್ಯದ ಪ್ರಜಾತಂತ್ರವನ್ನು ನಾಗರಿಕರಿಗೆ ನಿರಾಕರಿಸುವ ಕೆಲಸವನ್ನು ಅದು ಮಾಡುತ್ತದೆ' ಎಂದು ಸೋಮವಾರ ತೀರ್ಪಿನ ಪ್ರಮುಖ ಅಂಶಗಳನ್ನು ಓದುವ ಸಂದರ್ಭದಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.

ಪುನರ್‌ ಪರಿಶೀಲನೆ ಆಗಿದ್ದು ಹೀಗೆ...

  •               ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಶಾಸಕಿಯಾಗಿದ್ದ ಸೀತಾ ಸೊರೇನ್ ಅವರು 2012ರ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಆರ್‌.ಕೆ. ಅಗರ್ವಾಲ್ ಅವರಿಗೆ ಮತ ಚಲಾಯಿಸಲು ಲಂಚ ಪಡೆದಿದ್ದರು. ಆದರೆ ಅವರಿಗೆ ಮತ ಹಾಕಿರಲಿಲ್ಲ. ಇದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಸಿಬಿಐ ತನಿಖೆಗೆ ದಾರಿ ಮಾಡಿಕೊಟ್ಟಿತು.

  •              ಸೀತಾ ಸೊರೇನ್ ಅವರು ಜೆಎಂಎಂ ಪಕ್ಷದ ಸಂಸ್ಥಾಪಕ ಶಿಬು ಸೊರೇನ್ ಅವರ ಮಗಳು. ವಿಧಾನಸಭೆಯಲ್ಲಿ ತಾವು ಯಾವುದೇ ಮಾತು ಆಡಲಿ, ಯಾರಿಗೇ ಮತ ಚಲಾಯಿಸಲಿ, ಸದನದ ಸಮಿತಿಗಳಲ್ಲಿ ಯಾವುದೇ ಮಾತು ಆಡಲಿ ಆ ವಿಚಾರವಾಗಿ ತಮ್ಮ ವಿರುದ್ಧ ಕಾನೂನಿನ ಅಡಿ ಕ್ರಮ ಜರುಗಿಸುವಂತೆ ಇಲ್ಲ ಎಂದು ಸಂವಿಧಾನದ 194(2) ವಿಧಿಯು ಹೇಳುತ್ತದೆ ಎಂದು ಸೀತಾ ಅವರು ವಾದಿಸಿದ್ದರು. ಜೆಎಂಎಂ ಪಕ್ಷದ ಶಾಸಕಿಯಾಗಿ ತಾವು ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸಂಜೀವ್ ಕುಮಾರ್ ಅವರಿಗೆ ಮತ ಚಲಾಯಿಸಿದ್ದಾಗಿ ಹೇಳಿದ್ದರು.

  •                    ಸೀತಾ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಲು ಜಾರ್ಖಂಡ್ ಹೈಕೋರ್ಟ್‌ 2014ರಲ್ಲಿ ನಿರಾಕರಿಸಿತು. ಈ ಕ್ರಮವನ್ನು ಪ್ರಶ್ನಿಸಿ ಸೀತಾ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರು.

  •               ಇದು ಸಾರ್ವಜನಿಕ ಮಹತ್ವದ ಪ್ರಕರಣ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಿದ್ದ ರಂಜನ್ ಗೊಗೊಯಿ ಅವರು ಪ್ರಕರಣವನ್ನು ಮೂವರು ನ್ಯಾಯಮೂರ್ತಿಗಳ ಪೀಠಕ್ಕೆ ವಹಿಸಿದ್ದರು.

  •              ಸಂಸದರು ಹಾಗೂ ಶಾಸಕರು ಸದನದಲ್ಲಿ ಏನೇ ಮಾಡಿದ್ದರೂ ಅದಕ್ಕೆ ಕಾನೂನಿನ ಕ್ರಮದಿಂದ ರಕ್ಷಣೆ ಇದೆ ಎಂದು 1998ರಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು ಹೇಳಿತ್ತು. ಅಂದರೆ, ಶಾಸಕರು, ಸಂಸದರು ಮತ ಚಲಾಯಿಸಲು ಲಂಚ ಪಡೆದಿದ್ದರೂ ಅವರಿಗೆ ಕಾನೂನಿನ ಕ್ರಮದಿಂದ ರಕ್ಷಣೆ ಇತ್ತು.

  •                  ಇದಾದ ಒಂಬತ್ತು ವರ್ಷಗಳ ನಂತರದಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಇನ್ನೊಂದು ಪೀಠವು 'ಪ್ರಶ್ನೆ ಕೇಳಲು ಲಂಚ' ಪ್ರಕರಣದಲ್ಲಿ, ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಸಂಸದರು ಸಂಸತ್ತಿನಿಂದ ಶಾಶ್ವತವಾಗಿ ಹೊರಹಾಕಲು ಯೋಗ್ಯರು ಎಂದು ಹೇಳಿತ್ತು.

  •             2019ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸೀತಾ ಅವರ ಅರ್ಜಿಯು ವಿಚಾರಣೆಗೆ ಬಂತು. ಆಗ ತ್ರಿಸದಸ್ಯ ಪೀಠವು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿತು.

  • ಸೋಮವಾರ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು, ಲಂಚ ಪಡೆದಿದ್ದರೂ ಶಾಸಕರು, ಸಂಸದರಿಗೆ ರಕ್ಷಣೆ ಇದೆಯೇ ಎಂಬ ಪ್ರಶ್ನೆಗೆ ನಿರ್ಣಾಯಕ ಉತ್ತರವನ್ನು ನೀಡಿದೆ.

ಎರಡು ವಿಧಿಗಳ ಬಗ್ಗೆ ಪರಿಶೀಲನೆ

             ಶಾಸಕರು ಮತ್ತು ಸಂಸದರು ತಮ್ಮ ವಿರುದ್ಧ ಲಂಚದ ಆರೋಪ ಬಂದಾಗ, ಕ್ರಿಮಿನಲ್ ಪ್ರಕರಣಗಳ ನ್ಯಾಯಾಲಯದಲ್ಲಿ ಸಂವಿಧಾನದ 105 ಹಾಗೂ 194ನೇ ವಿಧಿಗಳ ಆಧಾರದಲ್ಲಿ ಕಾನೂನು ಕ್ರಮದಿಂದ ರಕ್ಷಣೆ ಪಡೆಯಬಹುದೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ ಪರಿಶೀಲನೆ ನಡೆಸಿದೆ.

                   1998ರ ಸುಪ್ರೀಂ ಕೋರ್ಟ್‌ ತೀರ್ಪು ಸಾರ್ವಜನಿಕ ಹಿತಾಸಕ್ತಿಯ ಮೇಲೆ, ಸಾರ್ವಜನಿಕ ಜೀವನದಲ್ಲಿ ಸಚ್ಚಾರಿತ್ರ್ಯದ ಮೇಲೆ ಮತ್ತು ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಬಹಳ ವಿಸ್ತೃತವಾದ ಪರಿಣಾಮವನ್ನು ಬೀರಿದೆ ಎಂದು ಏಳು ಸದಸ್ಯರ ನ್ಯಾಯಪೀಠವು ಸೋಮವಾರ ಹೇಳಿದೆ.

ಸಂವಿಧಾನ ಪೀಠದಲ್ಲಿ ಇದ್ದವರು

  • ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌,

  • ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ,
    ಎಂ.ಎಂ. ಸುಂದರೇಶ್,

  • ಪಿ.ಎಸ್. ನರಸಿಂಹ,

  • ಜೆ.ಬಿ. ಪಾರ್ದೀವಾಲಾ,

  • ಸಂಜಯ್ ಕುಮಾರ್ ಮತ್ತು

  • ಮನೋಜ್ ಮಿಶ್ರಾ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries