ಕಣ್ಣೂರು: ಪ್ರಬಲ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವ ಕಣ್ಣೂರು ಲೋಕಸಭೆ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಎನ್ ಡಿಎ ಅಭ್ಯರ್ಥಿಯಾಗಿ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಿ. ರಘುನಾಥ್ ಹಾಗೂ ಯುಡಿಎಫ್ ಅಭ್ಯರ್ಥಿಯಾಗಿ ಹಾಲಿ ಸಂಸದ ಹಾಗೂ ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಹಾಗೂ ಎಲ್ ಡಿಎಫ್ ಅಭ್ಯರ್ಥಿಯಾಗಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ. ಜಯರಾಜನ್ ಸ್ಪರ್ಧೆಗೆ ಇಳಿದಿದ್ದು, ಪೈಪೆÇೀಟಿ ಜೋರಾಗುವುದು ಖಚಿತ.
1977ರ ಕ್ಷೇತ್ರ ಪುನರ್ ವಿಂಗಡಣೆಯ ನಂತರ ನಡೆದ 12 ಲೋಕಸಭೆ ಚುನಾವಣೆಗಳಲ್ಲಿ ಮೂರರಲ್ಲಿ ಮಾತ್ರ ಸಿಪಿಎಂ ಗೆದ್ದಿದೆ. ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಗಳು ಬಹುತೇಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಲೋಕಸಭೆ ಚುನಾವಣೆಯಲ್ಲಿ ಮತದಾರರು ವಿಭಿನ್ನ ನಿಲುವು ತಳೆದಿದ್ದಾರೆ.
ಕಣ್ಣೂರು ಲೋಕಸಭಾ ಕ್ಷೇತ್ರವು ಕಣ್ಣೂರು ಜಿಲ್ಲೆಯ ಕಣ್ಣೂರು, ಧರ್ಮಡಂ, ಪೆರವೂರ್, ಇರ್ಕೂರ್, ತಳಿಪರಂಬ, ಅಝಿಕೋಡ್ ಮತ್ತು ಮಟ್ಟನ್ನೂರು ಕ್ಷೇತ್ರಗಳನ್ನು ಒಳಗೊಂಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಣ್ಣೂರು, ಧರ್ಮಡಂ, ತಳಿಪರಂಬ, ಮಟ್ಟನ್ನೂರು ಮತ್ತು ಅಝಿಕೋಡ್ ಕ್ಷೇತ್ರಗಳು ಎಲ್‍ಡಿಎಫ್ ಪರ ಇದ್ದರೆ, ಪೆರವೂರು ಮತ್ತು ಇರ್ಕೂರು ಕ್ಷೇತ್ರಗಳು ಯುಡಿಎಫ್‍ಗೆ ಸೇರಿದ್ದವು. ಧರ್ಮಡಂ ಕ್ಷೇತ್ರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ತಳಿಪರಂಬ ಕ್ಷೇತ್ರದ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಕೂಡ ಪ್ರತಿನಿಧಿಸಿರುವುದು ವಿಶೇಷ. ಕಣ್ಣೂರಿನಲ್ಲಿ ಪಿಣರಾಯಿ ಮತ್ತು ಎಂ.ವಿ. ಗೋವಿಂದನಿಗೂ ಇದು ಹೆಮ್ಮೆಯ ಕದನ ಕಣ.
1977ರಲ್ಲಿ ಸಿಪಿಐನ ಸಿ.ಕೆ. ಚಂದ್ರಪ್ಪನವರು ಗೆದ್ದರು. 1980 ರಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಯು) ಅಭ್ಯರ್ಥಿ ಕೆ. ಕುಂಞಂಬು ಗೆದ್ದರು. ನಂತರ 1984ರಿಂದ 1998ರವರೆಗೆ ಕ್ಷೇತ್ರ ಕಾಂಗ್ರೆಸ್ ಪಾಲಾಗಿತ್ತು. 1999ರಲ್ಲಿ ಎ.ಪಿ. ಅಬ್ದುಲ್ಲಕುಟ್ಟಿ ಮೂಲಕ ಕ್ಷೇತ್ರವನ್ನು ಎಲ್‍ಡಿಎಫ್ ವಶಪಡಿಸಿಕೊಂಡಿತು. 2004ರಲ್ಲೂ ಅಬ್ದುಲ್ಲಕುಟ್ಟಿ ಗೆದ್ದಿದ್ದರು. 2009 ರಲ್ಲಿ, ಕೆ.ಸುಧಾಕರನ್ ಮೂಲಕ ಯುಡಿಎಫ್ ಗೆದ್ದರೂ, 2014 ರಲ್ಲಿ ಪಿ.ಕೆ. ಶ್ರೀಮತಿ ಟೀಚರ್ ಸ್ಪರ್ಧಿಸುವ ಮೂಲಕ ಎಲ್‍ಡಿಎಫ್ ಕ್ಷೇತ್ರವನ್ನು ಹಿಂಪಡೆಯಿತು. 2019ರಲ್ಲಿ ಯುಡಿಎಫ್ ಅಭ್ಯರ್ಥಿ ಕೆ. ಸುಧಾಕರನ್ 94,599 ಮತಗಳಿಂದ ಎಲ್ ಡಿಎಫ್ ನ ಪಿ.ಕೆ. ಶ್ರೀಮತಿಯನ್ನು ಪರಾಭವಗೊಳಿಸಿದರು.
ಎಡ ಮತ್ತು ಬಲ ರಂಗಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸುವ ಮೊದಲೇ ಸಿ. ರಘುನಾಥ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಈ ಬಾರಿ ಎನ್ ಡಿಎ ಪ್ರಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ. ಎಲ್‍ಡಿಎಫ್ ಮತ್ತು ಯುಡಿಎಫ್‍ನಲ್ಲಿ ಹಲವು ಆಕಾಂಕ್ಷಿಗಳು ಅಭ್ಯರ್ಥಿಗಳಾಗಿ ಕ್ಷೇತ್ರ ಪ್ರವೇಶಿಸಿದ್ದು, ಒಮ್ಮತದಂತೆ ಎಂ.ವಿ. ಜಯರಾಜನ್ ಮತ್ತು ಕೆ. ಸುಧಾಕರನ್ ಅಭ್ಯರ್ಥಿಯಾದರು. ಇತರ ಲೋಕಸಭಾ ಕ್ಷೇತ್ರಗಳಿಗಿಂತ ಭಿನ್ನವಾಗಿ, ಸಿಪಿಎಂನ ಹಿಂಸಾಚಾರದ ರಾಜಕೀಯವು ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿದೆ, ಆದರೆ ಈ ಚುನಾವಣೆಯಲ್ಲಿ ಎನ್‍ಡಿಎ ಮೋದಿ ಸರ್ಕಾರದ ಅಭಿವೃದ್ಧಿ ಸಾಧನೆಗಳ ಮೇಲೆ ಕೇಂದ್ರೀಕರಿಸಿದೆ.
ಸಂಸದರಾಗಿ ಕೆ. ಸುಧಾಕರನ್ ಅವರ ಕಳಪೆ ನಿರ್ವಹಣೆ, ರಾಜ್ಯ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಭಾವನೆ ಮತ್ತು ಮೋದಿ ಸರ್ಕಾರದ ಅಭಿವೃದ್ಧಿ ಸಾಧನೆಗಳು ಕಣ್ಣೂರು ಲೋಕಸಭಾ ಕ್ಷೇತ್ರದಲ್ಲಿ ಚರ್ಚೆಯ ವಿಷಯವಾಗಿದೆ ಎನ್ನಲಾಗಿದೆ. ಕೆ. ಸುಧಾಕರನ್ ಕೆಪಿಸಿಸಿ ಅಧ್ಯಕ್ಷರಾದ ನಂತರ ಕ್ಷೇತ್ರಕ್ಕೆ ಭೇಟಿ ನೀಡುವುದು ಅಪರೂಪವಾಗಿದೆ ಎಂಬ ದೂರುಗಳೂ ಈ ಹಿಂದೆ ಮುನ್ನೆಲೆಗೆ ಬಂದಿತ್ತು.