ನವದೆಹಲಿ: 1951-52ರಲ್ಲಿ ಲೋಕಸಭೆಗೆ ಪ್ರಥಮ ಬಾರಿಗೆ ಚುನಾವಣೆ ನಡೆಯಿತು. ಆಗ ಮತದಾರರ ಪಟ್ಟಿ ಸಿದ್ಧಪಡಿಸುವಾಗ ಚುನಾವಣಾ ಆಯೋಗಕ್ಕೆ ವಿಚಿತ್ರ ಸಮಸ್ಯೆಯು ಎದುರಿಸಿತ್ತು. ಹೆಚ್ಚಿನ ಮಹಿಳಾ ಮತದಾರರು ತಮ್ಮ ಹೆಸರು ತಿಳಿಸಲು ಸಿದ್ಧರಿರಲಿಲ್ಲ!
ಕೆಲವು ರಾಜ್ಯಗಳಲ್ಲಿ ಹೆಚ್ಚಿನ ಮಹಿಳೆಯರು ತಾವು ಇಂಥವರ ಪತ್ನಿ, ತಾಯಿ ಅಥವಾ ಅಥವಾ ಮಗಳು ಎಂದು ಕುಟುಂಬದ ಪುರುಷ ಸದಸ್ಯರ ಜೊತೆಗೆ ಗುರುತಿಸಿಕೊಳ್ಳಲು ಬಯಸಿದ್ದರು.
ಆಗ ದೇಶದಲ್ಲಿದ್ದ ಮಹಿಳಾ ಮತದಾರರ ಸಂಖ್ಯೆ ಸುಮಾರು 8 ಕೋಟಿ. ಅವಧಿ ವಿಸ್ತರಣೆ ಹಾಗೂ ಜಾಗೃತಿ ನಂತರವೂ ಸುಮಾರು 2.8 ಕೋಟಿ ಮಹಿಳೆಯರು ಮತಪಟ್ಟಿಗೆ ತಮ್ಮ ನಿಜವಾದ ಹೆಸರು ನೀಡಿರಲೇ ಇಲ್ಲ. ಇದೇ ಕಾರಣಕ್ಕೇ ಅಷ್ಟೂ ಮತದಾರರ ಹೆಸರು ಕೈಬಿಡಲಾಗಿತ್ತು.
ಲೋಕಸಭೆಗೆ ಪ್ರಥಮ ಸಾರ್ವತ್ರಿಕ ಚುನಾವಣೆ ಕುರಿತಂತೆ 1955ರಲ್ಲಿ ಬಿಡುಗಡೆಯಾದ ಅಧಿಕೃತ ವರದಿಯಲ್ಲಿ ಈ ಉಲ್ಲೇಖವಿದೆ.
ಮಹಿಳೆಯರು ಹೀಗೆ ತಮ್ಮ ಹೆಸರನ್ನು ನೀಡಲು ನಿರಾಕರಿಸಿದ ಹೆಚ್ಚಿನ ಪ್ರಕರಣಗಳು ಬಿಹಾರ, ಉತ್ತರ ಪ್ರದೇಶ, ಮಧ್ಯಭಾರತ್, ರಾಜಸ್ಥಾನ, ವಿಂಧ್ಯ ಪ್ರದೇಶಗಳಲ್ಲಿ ಕಂಡುಬಿದ್ದವರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನಂತರದ ಚುನಾವಣೆಗಳಲ್ಲಿ ಪರಿಸ್ಥಿತಿ ಸುಧಾರಿಸಿತು. ಲೋಕಸಭೆಗೆ 2019ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಮತ ಹಕ್ಕು ಚಲಾಯಿಸುವ ಮೂಲಕ ಮಹಿಳೆಯರು ದಾಖಲೆ ಬರೆದರು.
2019ರಲ್ಲಿ ಮತದಾನ ಪ್ರಮಾಣ ಶೇ 67.4ರಷ್ಟಿತ್ತು. ಈ ಪೈಕಿ ಹಕ್ಕು ಚಲಾಯಿಸಿದ ಮಹಿಳಾ ಮತದಾರರ ಪ್ರಮಾಣ ಶೇ 67.18ರಷ್ಟಿದ್ದರೆ, ಪುರುಷ ಮತದಾರರ ಪ್ರಮಾಣ ಶೇ 67.01ರಷ್ಟಿತ್ತು.
ಹೆಸರು ಹೇಳಲೂ ನಿರಾಕರಿಸುತ್ತಿದ್ದ ಪರಿಸ್ಥಿತಿಗೆ ಹೋಲಿಸಿದರೆ, ಈ ಅಂಕಿ-ಅಂಶಗಳು ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಆಗಿರುವ ಪ್ರಮುಖ ಸುಧಾರಣೆಗೆ ಕನ್ನಡಿ. ಪುರುಷರ ನೆರಳಿನಿಂದ ಹೊರಬಂದಿದ್ದ ಮಹಿಳೆಯರು ತಮ್ಮದೇ ಛಾಪು ಮೂಡಿಸಲು ಆರಂಭಿಸಿದ್ದರು.
1950ರಲ್ಲಿ ಭಾರತ ಗಣರಾಜ್ಯವಾಗಿ ಘೋಷಣೆಯಾದ ದಿನದ ಒಂದು ದಿನ ಮೊದಲು ಭಾರತ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿತ್ತು. ಈವರೆಗೂ 17 ಸಾರ್ವತ್ರಿಕ ಚುನಾವಣೆಗಳು ನಡೆದಿವೆ. ಮೊದಲ ಚುನಾವಣೆಯಲ್ಲಿ ಸವಾಲು ಹೆಚ್ಚಿತ್ತು. ಆಗ ಹೆಚ್ಚಿನವರು ಅನಕ್ಷರಸ್ಥರಾಗಿದ್ದರು.
ಸ್ಥಳೀಯವಾಗಿ ಮಹಿಳೆಯರು ತಮ್ಮ ಹೆಸರು, ಗುರುತು ಹೇಳಿಕೊಳ್ಳಲಾಗದ ಸ್ಥಿತಿ ಇದ್ದುದೇ ಆಗಿನ ಭಿನ್ನ ಸಮಸ್ಯೆಗೆ ಕಾರಣವಾಗಿತ್ತು. ಸಮಸ್ಯೆ ಅರಿವಾಗುತ್ತಲೇ, ಮಹಿಳೆಯ ಹೆಸರು, ಕುಟುಂಬದ ಪುರುಷರ ಜೊತೆಗಿನ ಸಂಬಂಧ (ತಾಯಿ, ಸಹೋದರಿ, ಪತ್ನಿ) ಒಳಗೊಂಡು ಮತಪಟ್ಟಿಗೆ ಸೇರಿಸಲು ಕ್ರಮವಹಿಸಲಾಯಿತು. ಇದಕ್ಕಾಗಿ ಒಂದು ತಿಂಗಳು ಅವಧಿ ವಿಸ್ತರಿಸಲಾಗಿತ್ತು ಎಂದೂ ವರದಿ ಉಲ್ಲೇಖಿಸಿದೆ.
ಮತಪಟ್ಟಿಗೆ ಮಹಿಳೆಯರು ನಿಜ ಹೆಸರು ನಮೂದಿಸಬೇಕು ಎಂದು ತಿಳಿಸಿದ್ದು ಆಯೋಗದ ದೃಢವಾದ ಹೆಜ್ಜೆ. ಆಗಿನ ಕಠಿಣ ನಿರ್ಧಾರವು ಆಗಿತ್ತು. ಎನ್ನುತ್ತಾರೆ ದೆಹಲಿಯ ಮಾಜಿ ಮುಖ್ಯ ಚುನಾವಣಾಧಿಕಾರಿ ಚಂದ್ರ ಭೂಷಣ್ ಕುಮಾರ್.
ಈಗ 18ನೇ ಲೋಕಸಭೆಗೆ ಚುನಾವಣೆ ಸಿದ್ಧತೆ ನಡೆದಿರುವ ಹೊತ್ತಿನಲ್ಲಿ ಸಾಕಷ್ಟು ಬದಲಾಗಿದೆ. ಸ್ಥಿತಿ ಬದಲಾಗಿದೆ. ಚುನಾವಣೆ ಪ್ರಕ್ರಿಯೆಯಿಂದ ಭದ್ರತೆವರೆಗೆ ಮಹಿಳೆಯರೇ ನಿರ್ವಹಿಸುವ 'ಪಿಂಕ್ ಬೂತ್'ಗಳು ಸ್ಥಾಪನೆಯಾಗುತ್ತಿವೆ. ಈಗ ದೇಶದಲ್ಲಿ ಇಂತಹ 27,527 ಮತಗಟ್ಟೆಗಳಿವೆ.
'ಚುನಾವಣಾ ಪ್ರಕ್ರಿಯೆ: ಹೆಚ್ಚಿದ ನಾರಿ ಶಕ್ತಿ'
* ಮೊದಲ ಚುನಾವಣೆ ನಡೆದ 1951-52ರಲ್ಲಿ ಮತದಾರರ ಒಟ್ಟು ಸಂಖ್ಯೆ (ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ) 17.3 ಕೋಟಿ. ಇವರಲ್ಲಿ ಶೇ 45ರಷ್ಟು ಮಹಿಳೆಯರು.
* 2019ರಲ್ಲಿ ನಡೆದ ಚುನಾವಣೆಯಲ್ಲಿ ದೇಶದ ಒಟ್ಟು ಮತದಾರರ ಸಂಖ್ಯೆ 91.19 ಕೋಟಿ. ಇವರಲ್ಲಿ ಮಹಿಳಾ ಮತದಾರರ ಸಂಖ್ಯೆಯ 43.85 ಕೋಟಿ ಇದ್ದು, ಲಿಂಗಾನುಪಾತ 926 ಆಗಿತ್ತು.
* ಈಗ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಪ್ರಕಟಿಸಿರುವಂತೆ, ಪ್ರತಿ ಸಾವಿರ ಪುರುಷ ಮತದಾರರಿಗೆ ಮಹಿಳಾ ಮತದಾರರ ಸಂಖ್ಯೆ 948 ಆಗಿದೆ.
* 12 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಅಧಿಕವಾಗಿದ್ದಾರೆ. ಈಗಿನ ಮಹಿಳಾ ಮತದಾರರ ಒಟ್ಟು ಸಂಖ್ಯೆ 47.1 ಕೋಟಿ.