ಅಹಮದಾಬಾದ್: ಗುಜರಾತ್‌ನ ವಡೋದರ ಲೋಕಸಭಾ ಕ್ಷೇತ್ರದ ಹಾಲಿ ಬಿಜೆಪಿ ಸಂಸದೆ ಹಾಗೂ ಮುಂಬರುವ ಚುನಾವಣೆಗೆ ಟಿಕೆಟ್ ಪಡೆದುಕೊಂಡಿದ್ದ ರಂಜನ್ ಭಟ್, ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.
ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
'ನಾನು, ರಂಜನ್‌ಬೆನ್ ಧನಂಜಯ ಭಟ್, 2024ರ ಲೋಕಸಭಾ ಚುನಾವಣೆಗೆ ವೈಯಕ್ತಿಕ ಕಾರಣಗಳಿಂದಾಗಿ ಸ್ಪರ್ಧಿಸದಿರಲು ಇಚ್ಛಿಸುವುದಿಲ್ಲ' ಎಂದು ಎಕ್ಸ್ ತಾಣದಲ್ಲಿ ಬರೆದುಕೊಂಡಿದ್ದಾರೆ.
ಅವರನ್ನು ವಡೋದರ ಲೋಕಸಭಾ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿಸುವ ಬಿಜೆಪಿ ನಿರ್ಧಾರವನ್ನು ಪ್ರತಿಭಟಿಸಿ ನಗರದ ವಿವಿಧ ಭಾಗಗಳಲ್ಲಿ ಬ್ಯಾನರ್‌ಗಳು ಪ್ರತ್ಯಕ್ಷವಾಗಿದ್ದವು. ಇದರ ಬೆನ್ನಲ್ಲೆ ಕಣದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ.
'ಭಟ್ ಅವರನ್ನು ಮತ್ತೆ ಅಭ್ಯರ್ಥಿಯನ್ನಾಗಿ ಮಾಡುವುದಕ್ಕೆ ಕೆಲ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರನ್ನು ಉಮೇದುವಾರನನ್ನಾಗಿ ಘೋಷಣೆ ಮಾಡದ ಬಳಿಕ ಬಿಜೆಪಿ ಮಹಿಳಾ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷೆ ಜ್ಯೋತಿಬೆನ್ ಪಾಂಡ್ಯ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಡೋದರಾ ಹಾಗೂ ವಾರಾಣಸಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಬಳಿಕ ವಡೋದರಕ್ಕೆ ರಾಜೀನಾಮೆ ನೀಡಿದ್ದರು. ಈ ಕ್ಷೇತ್ರದಿಂದ ಭಟ್ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2019ರಲ್ಲೂ ಗೆದ್ದಿದ್ದರು. ಇದೀಗ ಮತ್ತೆ ಟಿಕೆಟ್ ಪಡೆದಿದ್ದರು.