ಕಾಸರಗೋಡು: ವಾಹನ ಚಾಲನಾ ಪರೀಕ್ಷೆಗೆ ಆಗಮಿಸಿದ್ದ ಅಭ್ಯರ್ಥಿಗಳ ಸಂಖ್ಯೆಯನ್ನು ಏಕಾಏಕಿ ಕಡಿತಗೊಳಿಸಿದ ಮೋಟಾರುವಾಹನ ಇಲಾಖೆ ಅಧಿಕಾರಿಗಳ ಕ್ರಮ ಖಂಡಿಸಿ ನಗರದ ಮೋಟಾರು ಡ್ರೈವಿಂಗ್ ಶಾಲೆ ಮಾಲಿಕರು ಮೈದಾನದಲ್ಲೇ ಮಿಮಚಿನ ಮುಷ್ಕರ ನಡೆಸಿದ್ದಾರೆ.
ಕಾಸರಗೋಡು ಎ.ಆರ್ ಕ್ಯಾಂಪ್ ಮೈದಾನದಲ್ಲಿ 124ಮಂದಿಗೆ ವಾಹನ ಡ್ರೈವಿಂಗ್ ಪರಿಕ್ಷೆ ಏರ್ಪಡಿಸಲಾಗಿದ್ದು, ಇವರೆಲ್ಲರೂ ಮೈದಾನಕ್ಕೆ ಆಗಮಿಸಿದ್ದರು. ಆದರೆ, ಮೋಟಾರು ವಾಹನ ಇಲಾಖೆ ಅಧಿಕಾರಿಗಳು 50ಮಂದಿಗೆ ಮಾತ್ರ ಪರೀಕ್ಷೆಗೆ ಅವಕಾಶ ಕಲ್ಪಿಸಿರುವುದಾಗಿ ಘೋಷಿಸಿದ್ದರು. ಇದರಿಂದ ವಾಹನ ಚಾಲನಾ ತರಬೇತಿ ಮಾಲಿಕರು ಇಕ್ಕಟ್ಟಿಗೆ ಸಿಲುಕಿದ್ದು, ಮುಂಚಿತವಾಗಿ ಮಾಹಿತಿ ನೀಡದಿರುವುದನ್ನು ಪ್ರತಿಭಟಿಸಿ ಮೈದಾನದಲ್ಲಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು. ಅಗತ್ಯದ ಎಲ್ಲ ಸಿದ್ಧತೆಗಳೊಂದಿಗೆ ಮೈದಾನಕ್ಕೆ ಆಗಮಿಸಿದ್ದ ಪರೀಕ್ಷಾರ್ಥಿಗಳು ಅಧಿಕಾರಿಗಳ ದಿಢೀರ್ ತೀರ್ಮಾನದಿಂದ ಅಂದು ಪರೀಕ್ಷೆ ಎದುರಿಸುವಲ್ಲಿ ವಂಚಿತರಾಗಿದ್ದರು. ಸರ್ಕಾರ ತೀರ್ಮಾನ ಪ್ರಕಾರ ಒಂದು ಕೇಂದ್ರದಲ್ಲಿ ದಿನಕ್ಕೆ 50ಮಂದಿಗೆ ಮಾತ್ರ ಪರೀಕ್ಷೆ ನಡೆಸಲು ಅನುಮತಿ ನೀಡಿರುವುದರಿಂದ ಈ ಕ್ರಮ ಕೈಗೊಳ್ಳಬೇಕಾಗಿ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಭಟನಾಕಾರರಿಗೆ ಈ ಬಗ್ಗೆ ಮನವರಿಕೆ ಮಾಡಿ, ಮುಂದಿನ ದಿನಾಂಕದಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಯಿತು.